ಕೇಂದ್ರ ಬಜೆಟ್-2018: ರಾಜ್ಯ ರಾಜಕೀಯ ನಾಯಕರ ಹೇಳಿಕೆಗಳು ಹೀಗಿವೆ

‘ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಅಭಿವೃದ್ಧಿಗೆ ಪೂರಕವಾಗಿಲ್ಲ. ರೈತರ ಸಾಲಮನ್ನಾ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸ್ಪಂದಿಸಿಲ್ಲ’
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
‘ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲೆ ಮಂಡಿಸಿದ ಬಜೆಟ್ ಯಾವುದೇ ಕ್ಷೇತ್ರವನ್ನೂ ತೃಪ್ತಿ ಪಡಿಸಿಲ್ಲ. ಮುಖ್ಯವಾಗಿ ಮಹಿಳಾ ಸಬಲೀಕರಣದ ಬಗ್ಗೆ ಗಮನ ಕೊಟ್ಟಿಲ್ಲ. ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚುವ ಆಯವ್ಯಯ ಇದಾಗಿದೆ’
-ಲಕ್ಷ್ಮಿ ಹೆಬ್ಬಾಳ್ಕರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ
‘ಪ್ರಧಾನಿ ನರೇಂದ್ರ ಮೋದಿಯವರ ಈ ಬಜೆಟ್ ಮಾಧ್ಯಮಗಳಿಗೂ ತೃಪ್ತಿ ತಂದಿಲ್ಲ. ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಉಡುಗೊರೆ ನೀಡುತ್ತಾರೆಂಬ ನಿರೀಕ್ಷೆಯೂ ಹುಸಿಯಾಗಿದೆ. ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಸಿಕ್ಕಿರುವುದು ದೊಡ್ಡ ಸೊನ್ನೆ. ಇದಕ್ಕೆ ಜನ ಮರಳಾಗುತ್ತಿದ್ದಾರೆ’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ
‘ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ರೈಲ್ವೆ ಇಲಾಖೆ ಆಧುನೀಕರಣ ನಿಟ್ಟಿನಲ್ಲಿ ವೈಫೈ, ಸಿಸಿಟಿವಿ ಅಳವಡಿಕೆ, ನಿಲ್ದಾಣಗಳಲ್ಲಿ ಎಸ್ಕಲೇಟರ್ ಸೇರಿ 600ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ವಹಿಸಿರುವುದು ಸ್ವಾಗತಾರ್ಹ. ಆರ್ಥಿಕ ಪ್ರಗತಿಗೆ ಒತ್ತು ನೀಡಿ, ಕೃಷಿ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಂಡಿರುವ ಮೋದಿ ಸರಕಾರಕ್ಕೆ ಅಭಿನಂದನೆ’
-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ
ದೇಶದ್ರೋಹಿ ಬಜೆಟ್
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ಮೇಲ್ನೋಟಕ್ಕೆ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಕಂಡಬಂದರೂ ಸಹ ಅಂತರಂಗದಲ್ಲಿ ಜನ ವಿರೋಧಿಯಾಗಿದ್ದು, ಅಬ್ಬರದ ಘೋಷಣೆಗಳ ಮೂಲಕ ಸತ್ಯ ಮರೆಮಾಚಲು ಪ್ರಯತ್ನಿಸಿದೆ. ಕೃಷಿ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳ ಬೆಲೆ ಹೆಚ್ಚಿಸಿ ವಿದ್ಯಾರ್ಥಿ, ಯುವಜನರನ್ನು ನಿರಾಶೆಗೊಳಿಸಲಾಗಿದೆ. ಸರಕಾರಿ ಆಸ್ಪತ್ರೆಗಳ ಸೌಲಭ್ಯ ಮೇಲ್ದರ್ಜೆಗೇರಿಸುವ ಬದಲು 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ನೀಡುವುದಾಗಿ ಘೋಷಿಸಿ ವೈದ್ಯಕೀಯ ಸೇವೆಯನ್ನು ಖಾಸಗಿಕರಣಗೊಳಿಸಿದೆ. ಅಂಗನವಾಡಿ, ಆಶಾ, ಬಿಸಿ ಊಟ, ಗ್ರಾಮೀಣ ಉದ್ಯೋಗ ಖಾತರಿ ಯೋಜನಗಳಿಗೆ ಹೆಚ್ಚಿನ ಅನುದಾನ ಒದಗಿಸದೆ ಅವುಗಳನ್ನು ನಾಶಪಡಿಸಲು ಮುಂದಾಗಿದೆ. ಎಕ್ಸೈಸ್ ಸುಂಕದಲ್ಲಿ ರೂ.1.50ರೂ. ಕಡಿತಗೊಳಿಸಿ ಪ್ರತಿ ಲೀಟರ್‌ಗೆ 2ರೂ. ಸೆಸ್ ಹೆಚ್ಚಳ ಮಾಡಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಸಂಘ ಪರಿವಾರದ ಕೇಂದ್ರ ಸರಕಾರ ರಕ್ಷಣಾ ವಲಯವನ್ನು ವಿದೇಶಿ ಕಂಪನಿಗಳಿಗೆ ಒಪ್ಪಿಸಿ ದೇಶದ್ರೋಹವೆಸಗಿದೆ.
-ಸ್ವಾತಿ ಸುಂದರೇಶ್, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ







