ಮ್ಯಾನ್ಮಾರ್‌ನಲ್ಲಿ ಬಂಧನಕ್ಕೀಡಾದ ‘ರಾಯ್ಟರ್’ ವರದಿಗಾರರಿಗೆ ಜಾಮೀನು ನಿರಾಕರಣೆ

ಯಂಗೋನ್, ಫೆ.1: ದೇಶದ ವಸಾಹತು ಕಾಲದ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ‘ರಾಯ್ಟರ್’ ಸಂಸ್ಥೆಯ ಇಬ್ಬರು ವರದಿಗಾರರಿಗೆ ಜಾಮೀನು ನೀಡಲು ಮ್ಯಾನ್ಮಾರ್‌ನ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.
ಆರೋಪಿಗಳ ಬಳಿ ಪತ್ತೆಯಾಗಿದೆ ಎಂದು ಹೇಳಲಾಗಿರುವ ದಾಖಲೆಗಳಲ್ಲಿದ್ದ ಮಾಹಿತಿಗಳು ದಿನಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಲಭ್ಯವಾಗಿದ್ದ ಮಾಹಿತಿಗಳಾಗಿದ್ದವು ಎಂದು ಆರೋಪಿಗಳ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸುಮಾರು 6,90,000 ರೊಹಿಂಗ್ಯಾ ಮುಸ್ಲಿಮರು ಸಮೀಪದ ಬಾಂಗ್ಲಾದೇಶಕ್ಕೆ ವಲಸೆ ಹೋಗುವಂತೆ ಮಾಡಿದ ಆಗಸ್ಟ್ 25ರ ಸೇನಾ ಕಾರ್ಯಾಚರಣೆ ನಡೆದ ರಖೈನ್ ರಾಜ್ಯದಲ್ಲಿ ಈ ಘಟನೆಯ ವರದಿ ಮಾಡಲು ರಾಯ್ಟರ್ ಸಂಸ್ಥೆಯಿಂದ 31ರ ಹರೆಯದ ವಾ ಲೋನ್ ಮತ್ತು 27ರ ಹರೆಯದ ಕ್ಯಾವ್ ಸೋ ಊ ತೆರಳಿದ್ದರು ಎಂದು ಸಂಯುಕ್ತ ರಾಷ್ಟ್ರ ತಿಳಿಸಿದೆ.
ಡಿಸೆಂಬರ್ 12ರಂದು ಈ ವರದಿಗಾರರನ್ನು ಪೊಲೀಸ್ ಅಧಿಕಾರಿಗಳ ಜೊತೆ ಭೋಜನಕೂಟದಲ್ಲಿ ಭಾಗವಹಿಸಲು ಯಾಂಗೋನ್‌ಗೆ ಆಹ್ವಾನಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ವರದಿಗಾರರನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಬಂಧಿತರು ತಮ್ಮ ಸಂಬಂಧಿಕರಿಗೆ ತಿಳಿಸಿರುವಂತೆ, ಅವರ ಬಳಿಯಿದ್ದ ಕೆಲವು ದಾಖಲೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ ಕೂಡಲೇ ಇಬ್ಬರನ್ನೂ ಬಂಧಿಸಲಾಗಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತಮ್ಮ ವರದಿಗಾರರಿಗೆ ಜಾಮೀನು ನಿರಾಕರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಯ್ಟರ್ ಸಂಸ್ಥೆಯ ಅಧ್ಯಕ್ಷರು ಮತ್ತು ಮುಖ್ಯ ಸಂಪಾದಕರಾದ ಸ್ಟೀವನ್ ಜೆ. ಅಡ್ಲೆರ್, ವರದಿಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.







