ಲಂಚ ಸ್ವೀಕಾರ ಪ್ರಕರಣ: ಇಬ್ಬರಿಗೆ ಶಿಕ್ಷೆ
ಮಂಗಳೂರು, ಫೆ. 1: ಮನೆಗೆ ಡೋರ್ ನಂಬ್ರ ಕೊಡಲು ಸಾರಿಕ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟು, 2012ರ ಮಾ. 28ರಂದು 3,000 ರೂ. ಲಂಚ ಪಡೆದ ಕೊಣಾಜೆ ಗ್ರಾಮ ಪಂಚಾಯತ್‌ನಲ್ಲಿ ಪಿ.ಡಿ.ಒ. ಆಗಿದ್ದ ಸಾವಿತ್ರಿ ಮತ್ತು ಕಾರ್ಯದರ್ಶಿ ಅಬೂಬಕರ್ ಪಿ.ಕೆ. ಎಂಬವರಿಗೆ ಮಂಗಳೂರು ಲೋಕಾಯುಕ್ತ ಕೋರ್ಟ್ ಗುರುವಾರ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅವರು 3,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರು ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ಇಬ್ಬರು ಅಪರಾಧಿಗಳಿಗೆ ಕಲಂ 7 ರ ಅಡಿಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ. ಕಲಂ 13 (1) (ಡಿ)ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ. ದಂಡ ತೆರಲು ತಪ್ಪಿದಲ್ಲಿ ತಲಾ ಮೂರು ತಿಂಗಳ ಸಾದಾ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.
ಆಗಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಉಮೇಶ್ ಜಿ. ಶೇಟ್ ಅವರ ನೇತೃತ್ವದದಲ್ಲಿ ಆರೋಪಿಗಳನ್ನು ಬಂದಿಸಲಾಗಿತ್ತು. ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.







