ಜಗಳೂರು: ನಾಲ್ಕು ವರ್ಷಗಳಲ್ಲಿ ನೀರಾವರಿಗೆ 7 ಸಾವಿರ ಕೋಟಿ ರೂ. ಖರ್ಚು: ಸಿದ್ದರಾಮಯ್ಯ

ಜಗಳೂರು,ಫೆ.01: ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ 46 ಕೆರೆ ತುಂಬಿಸುವುದು ಈಗಾಗಲೆ ಡಿಪಿಆರ್‍ಗೆ ಟೆಂಡರ್ ಆಗಿದ್ದು, ಸರ್ವೆಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಕೆರೆ ತುಂಬಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮತ್ರಿ ಸಿದ್ದರಾಮಯ್ಯ ಹೇಳಿದರು.
ತರಳುಬಾಳು ಹುಣ್ಣಿಮೆಯ ಕೊನೆ ದಿನದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ನೀರಾವರಿಗೆ 7 ಸಾವಿರ ಕೋಟಿ ರು. ಖರ್ಚು ಮಾಡಲಾಗಿದೆ. ಮುಂದೆಯೂ ಇದನ್ನು ಆದ್ಯ ಕರ್ತವ್ಯ ಎಂದು ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು ದಸರಾ ಬಿಟ್ಟರೆ ತರಳಬಾಳು ಹುಣ್ಣಿಮೆ ರಾಜ್ಯದ ಜನತೆಯ ಮತ್ತೊಂದು ಹಬ್ಬವಾಗಿದೆ. ಧರ್ಮಜಾಗೃತಿ, ಶಿಕ್ಷಣ, ಭಾಷೆ, ಸಂಸ್ಕೃತಿ, ಕಲೆ, ಇವೆಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಸಲು ತರಳುಬಾಳು ಹುಣ್ಣಿಮೆ ಯಂತಹ ಕಾರ್ಯಕ್ರಮಗಳು ಜನರಲ್ಲಿ ಮಾನವೀಯ ಮೌಲ್ಯ ಬಿತ್ತುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಸವಾದಿ ಶರಣರ ಪ್ರಯತ್ನಕ್ಕೆ ಸಿರಿಗೆರೆ ಬೃಹನ್ಮಠ ಕೆಲಸ ಮಾಡುತ್ತಿದೆ. ಪ್ರತಿಯೂಬ್ಬರು ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕಿದೆ. ಕುವೆಂಪು ಪ್ರತಿ ಮಗುವು ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತೆ, ಆನಂತರ ವ್ಯವಸ್ಥೆಯ ಪರಿಣಾಮದಿಂದ ಬಹುತೇಕರು ಅಲ್ಪ ಮಾನವರಾಗುತ್ತಾರೆ ಎಂದಿದ್ದಾರೆ. ನಾವೆಲ್ಲರು ಕುವೆಂಪು ಅವರು ಹೇಳಿದಂತೆ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕಿದೆ. ಇದು ಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಆಶಯ ಮತ್ತು ನಮ್ಮೆಲ್ಲರ ಆಶಯವೂ ಆಗಿದೆ. ಸಿರಿಗೆರೆ ಶ್ರೀ ಪ್ರತಿವರ್ಷ ತರಳಬಾಳು ಹುಣ್ಣಿಮೆ ಮೂಲಕ ಸಾಮರಸ್ಯದ ಬದುಕು ರೂಪಿಸುತ್ತಿದ್ದಾರೆ. ಮೊದಲು ಸಿರಿಗೆರೆಯಲ್ಲಿ ಮಾತ್ರ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆಯನ್ನು 1950ರಿಂದ ಈಚೆಗೆ ರಾಜ್ಯದ ಇತರೆ ಪ್ರದೇಶಗಳಲ್ಲಿಯೂ ಆಚರಿಸಲಾಗುತ್ತಿದೆ. ಪ್ರಸ್ತುತ ತರಳಬಾಳು ಹುಣ್ಣಿಮೆ ಜನಸಾಗರ ನೋಡಿದರೆ ಮನಸ್ಸಿಗೆ ಆನಂದ ತಂದುಕೊಡುತ್ತಿದೆ. ಧರ್ಮ, ಜೀವನ, ಕಲೆ, ಸಂಸ್ಕರತಿ, ನೆಲ, ಜಲ ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೂಬ್ಬರು ಜವಾಬ್ದಾರಿಯುತವಾಗಿ ಬಾಳಲು ಇಂತಹ ತರಳುಬಾಳು ಹುಣ್ಣಿಮೆ ಅವಕಾಶ ಕಲ್ಪಿಸಿರುವುದು ಶ್ರೀಮಠದ ಕಾರ್ಯಕ್ಕೆ ಶ್ಲಾಘನೀಯ ಎಂದರು.
ರಾಜ್ಯ ಪದೇ-ಪದೇ ಬರಗಾಲ ಅನುಭವಿಸುತ್ತಿದೆ. ರಾಜಸ್ಥಾನ ಬಿಟ್ಟರೆ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಕಳೆದ 16 ವರ್ಷಗಳಲ್ಲಿ 13 ವರ್ಷ ಬರ ಪರಿಸ್ಥಿತಿ ಇದೆ. ಬರಗಾಲ ಒಣ ಬೇಸಾಯಕ್ಕೆ ಅಡ್ಡಿಯಾಗಿದೆ ಒಣಬೇಸಾಯ ರೈತರಿಗೆ ಶಕ್ತಿ ಕೊಡುವ ಕೆಲಸ ಮಾಡಬೇಕಿದೆ ಎಂದರು.
ಇದು ರಾಜಕೀಯ ವೇದಕೆಯಲ್ಲ ಧಾರ್ಮಿಕ ಕಾರ್ಯಕ್ರಮ ಪೂಜ್ಯರು ಸಾಮಾಜಿಕ ಸಮಸ್ಯೆ ಗುರುತಿಸಿ ಪರಿಹಾರ ಸೂಚಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಾಂವಿಧಾನಿಕವಾದಂತಹ ಕೆಲಸ. ಜಗಳೂರು, ಹರಪನಹಳ್ಳಿ, ದಾವಣಗೆರೆ ಭಾಗ ಮೆಕ್ಕೆಜೋಳಕ್ಕೆ ಸೈನಿಕ ಹುಳ ಬಾಧೆಯಾಗಿ ರೈತರಿಗೆ ಸುಮಾರು 50ಸಾವಿರ ಹೆಕ್ಟೇರ್ ಪ್ರದೇಶ ಬೆಳೆನಷ್ಟ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈ ಕೂಡಲೆ ಬೆಳೆಹಾನಿಯಾದವರಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಕ್ಷೇತ್ರದ ಶಾಸಕ ಹೆಚ್.ಪಿ. ರಾಜೇಶ್ ಕೆರೆ ತುಂಬಿಸಲು ಗಮನಕ್ಕೆ ತಂದಿದ್ದಾರೆ. ತುಂಗಭದ್ರಾ ನದಿಯಿಂದ 46 ಕೆರೆ ತುಂಬಿಸುವುದು ಈಗಾಗಲೆ ಡಿಪಿಆರ್ ಮಾಡಲು ಸರ್ವೆಕಾರ್ಯ ನಡೆಯುತ್ತಿದೆ. ರಾಜ್ಯಸರ್ಕಾರ ಕೆರೆ ತುಂಬಿಸಲು 7 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮುಂದೆಯೂ ಇದನ್ನು ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಜಗಳೂರಿಗೆ ನೀರು ಹರಿಸಲು ಸಮಿತಿ ರಚಿಸಿದ್ದು, ವರದಿ ಬಂದ ಬಳಿಕ ಕೂಡಲೆ ಕ್ರಮ ಕೈಗೊಳ್ಳಲಾಗುವುದು. 46 ಕೆರೆಗಳನ್ನು ತುಂಬಿಸಲು ಗಂಭೀರ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು
ಪಂಡಿತಾರಾಧ್ಯ ಸ್ವಾಮೀಜಿ, ಸಚಿವರುಗಳಾದ ಹೆಚ್. ಆಂಜನೇಯ, ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ರಾಜ್ಯಸಭಾ ಸದಸ್ಯ ಕೆ.ಆರ್.ಜಯದೇವಪ್ಪ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‍ಚಾವ್ಲಾ, ವಿಯೆನ್ನಾದ ಡಾ.ಬೆಟಿನಾ ಶಾರದಾ ಬೋಯ್‍ಮರ್, ಮಾಲತಿ ಕೇಸರಿ, ಅಂಕಣಕಾರ, ಪ್ರೋಎಂ.ಕೃಷ್ಣೆಗೌಡ, ಸಂಸದ ಎಂ.ಚಂದ್ರಪ್ಪ, ಶಾಸಕರುಗಳಾದ ಹೆಚ್.ಪಿ.ರಾಜೇಶ್, ಭೀಮನಾಯ್ಕ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಟಿ.ಗುರುಸಿದ್ದನಗೌಡ, ಕೆ.ಬಿ. ಕಲ್ಲೇರುದ್ರೇಶ್, ಡಾ.ಮಂಜುನಾಥಗೌಡ ಉಪಸ್ಥಿತರಿದ್ದರು.







