ಇಂಡಿಯಾ ಓಪನ್ ಬಾಕ್ಸಿಂಗ್: ಮೇರಿ ಕೋಮ್‌ಗೆ ಚಿನ್ನ

ಹೊಸದಿಲ್ಲಿ, ಫೆ.1: ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಮೆಂಟ್‌ನ ಕೊನೆಯ ದಿನವಾದ ಗುರುವಾರ ಹಿರಿಯ ಬಾಕ್ಸರ್ ಎಂ.ಸಿ. ಮೇರಿಕೋಮ್ ಚಿನ್ನದ ಪದಕ ಜಯಿಸಿದರು. ಉತ್ತಮ ಪ್ರದರ್ಶನ ನೀಡಿದ ಪುರುಷ ಬಾಕ್ಸರ್‌ಗಳು ಕ್ಲೀನ್‌ಸ್ವೀಪ್ ಸಾಧಿಸುವ ಕ್ಯೂಬಾ ಹಾಗೂ ಉಝ್ಬೇಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದರು.
ಮಹಿಳೆಯರ 48 ಕೆ.ಜಿ. ತೂಕ ವಿಭಾಗದಲ್ಲಿ ಫೆಲಿಪಿನೊ ಜೊಸೀ ಗಾಬುಕೊರನ್ನು 4-1 ರಿಂದ ಮಣಿಸಿದ ಮೇರಿ ಕೋಮ್ ಚಿನ್ನ ಜಯಿಸಿದರು. ವಿಲಾವೊ ಬಸುಮಂಟರಿ(64 ಕೆಜಿ)ಟೂರ್ನಿಯಲ್ಲಿ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ.
ಮಾಜಿ ವಿಶ್ವ ಹಾಗೂ ಏಷ್ಯನ್ ಗೇಮ್ಸ್ ಚಾಂಪಿಯನ್ ಬಸುಮಂಟರಿ ಥಾಯ್ಲೆಂಡ್‌ನ ಸುಡಪರ್ನ್ ಸೀಸೊಂದೀ ಅವರನ್ನು 3-2 ರಿಂದ ಮಣಿಸಿದ್ದಾರೆ. ಅಸ್ಸಾಂನ ಇನ್ನೋರ್ವ ಬಾಕ್ಸರ್ ಲವ್‌ಲಿನಾ ಬಾರ್ಗೊಹೈನ್ ವೆಲ್ಟರ್‌ವೇಟ್(69 ಕೆ.ಜಿ.)ವಿಭಾಗದಲ್ಲಿ ಸಹ ಆಟಗಾರ್ತಿ ಪೂಜಾರನ್ನು ಸೋಲಿಸಿ ಚಿನ್ನ ಜಯಿಸಿದರು.
ಎಲ್.ಸರಿತಾದೇವಿ(60 ಕೆಜಿ)ಫಿನ್‌ಲ್ಯಾಂಡ್‌ನ ಮೀರಾ ಪೊಟ್ಕೆನೊನ್ ವಿರುದ್ಧ 2-3 ರಿಂದ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟರು.
ಪುರುಷರ 91 ಕೆಜಿ ವಿಭಾಗದಲ್ಲಿ ಸಂಜೀತ್ ಉಝ್ಬೇಕಿಸ್ತಾನದ ಸಂಜರ್ ಟರ್ಸುನೊವ್‌ರನ್ನು 3-2 ಅಂತರದಿಂದ ಸೋಲಿಸಿ ಚಿನ್ನ ಜಯಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಏಷ್ಯನ್ ಮೆಡಲಿಸ್ಟ್ ಶಿವ ಥಾಪಗೆ ಶಾಕ್ ನೀಡಿರುವ ನ್ಯಾಶನಲ್ ಚಾಂಪಿಯನ್ ಮನೀಶ್ ಕೌಶಿಕ್(60 ಕೆಜಿ)ಎದುರಾಳಿ ಮಂಗೋಲಿಯದ ಬಟ್ಟುಮುರ್ ಮಿಶೀಲ್ಟ್ ಹಣೆಗೆ ಗಾಯವಾಗಿ ವಾಕ್ ಓವರ್ ಪಡೆದ ಕಾರಣ ಸ್ಪರ್ಧಿಸದೇ ಸ್ವರ್ಣ ಜಯಿಸಿದರು.
ಸತೀಶ್ ಕುಮಾರ್(+91ಕೆಜಿ) ಉಝ್ಬೇಕಿಸ್ತಾನದ ಬಾಖೊದಿರ್ ಜಲೊಲೊವ್ ವಿರುದ್ಧ 1-4 ರಿಂದ ಸೋಲುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಉಝ್ಬೇಕಿಸ್ತಾನದ ಬೊಬೊ-ಉಸ್ಮಾನ್ ವಿರುದ್ಧ ಶರಣಾಗಿರುವ ದಿನೇಶ್ ದಾಗಾರ್(69 ಕೆಜಿ) ಬೆಳ್ಳಿ ಜಯಿಸಿದರು.







