ಉತ್ತರ ಪ್ರದೇಶ: ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಕೈಗೊಂಡ ಹಿರಿಯ ಐಪಿಎಸ್ ಅಧಿಕಾರಿ!

ಲಕ್ನೋ,ಫೆ.2 : ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಉತ್ತರ ಪ್ರದೇಶದ ಹೋಂಗಾಡ್ರ್ಸ್ ಮಹಾನಿರ್ದೇಶಕ ಸೂರ್ಯ ಕುಮಾರ್ ಶುಕ್ಲಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭ ಅಯ್ಯೋಧ್ಯೆಯಲ್ಲಿ ರಾಮ ಮಂದಿರವನ್ನು ಶೀಘ್ರ ನಿರ್ಮಿಸುವ ಬಗ್ಗೆ ಕೈಗೊಂಡಿದ್ದಾರೆನ್ನಲಾದ ಸಂಕಲ್ಪ ವಿವಾದಕ್ಕೀಡಾಗಿದೆ.
1992 ಬ್ಯಾಚ್ ಅಧಿಕಾರಿಯಾಗಿರುವ ಶುಕ್ಲಾ ಅವರು ಜನವರಿ 28ರಂದು ಲಕ್ನೋ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತೀಯ ಸಮಗ್ರ ವಿಚಾರ್ ಮಂಚ್ ಆಯೋಜಿಸಿದ್ದ ಖಾಸಗಿ ಸಮಾರಂಭವೊಂದರಲ್ಲಿ ಇತರರೊಡಗೂಡಿ ಸಂಕಲ್ಪ ಮಾಡಿದ್ದು ಈ ಕಾರ್ಯಕ್ರಮದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಹಮ್ ಸಬ್ ರಾಮ್ ಭಕ್ತ್, ಆಜ್ ಕೆ ಕಾರ್ಯಕ್ರಮ್ ಕೆ ದೌರಾನ್, ಯೇ ಸಂಕಲ್ಪ್ ಲೇತೇ ಹೇ ಕಿ ಜಲ್ದ್ ಸೆ ಜಲ್ದ್ ರಾಮ್ ಮಂದಿರ್ ಕಾ ಭವ್ಯ ನಿರ್ಮಾಣ್ ಹೋ” (ನಾವು ರಾಮ ಭಕ್ತರು, ಈ ಕಾರ್ಯಕ್ರಮದಲ್ಲಿ ರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕೆಂದು ಸಂಕಲ್ಪ ಮಾಡುತ್ತೇವೆ) ಎಂದ್ದಾರೆ.
ಈ ಸಂಕಲ್ಪ ಮಾಡಿದ ಅಧಿಕಾರಿಗಳಲ್ಲಿ ಶುಕ್ಲಾ ಅವರು ಹಿರಿಯರಾಗಿದ್ದು ಅವರು ಬರುವ ವರ್ಷ ನಿವೃತ್ತರಾಗಲಿದ್ದಾರೆ. ಆದರೆ ತಮ್ಮ ಸಂಕಲ್ಪವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದವರು ಹೇಳಿದ್ದಾರೆ.
“ಅದೊಂದು ಬುದ್ಧಿಜೀವಿಗಳ ಸಭೆಯಾಗಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರೂ ಭಾಗವಹಿಸಿದ್ದರು. ಈ ಸಮಸ್ಯೆಗೆ ಶಾಂತಿಯುತ ಹಾಗೂ ಶೀಘ್ರ ಪರಿಹಾರದ ಅಗತ್ಯವಿದೆಯೆಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮುಸ್ಲಿಮರೂ ಅಭಿಪ್ರಾಯ ಪಟ್ಟಿದ್ದರು. ರಾಮ ಮಂದಿರವನ್ನು ರಾಮ ಜನ್ಮಭೂಮಿಯಲ್ಲಿ ಮತ್ತು ಮಸೀದಿಯನ್ನು ಸ್ವಲ್ಪ ದೂರದಲ್ಲಿ ನಿರ್ಮಿಸಬಹುದೆಂದು ಅವರು ಸೂಚಿಸಿದಾಗ ಎಲ್ಲರೂ ಸ್ವಾಗತಿಸಿದ್ದಾರೆ. ಇದು ಹೈಕೋರ್ಟ್ ಸೂಚಿಸಿದ ಪರಿಹಾರದಂತೆಯೇ ಇದೆ ಎಂದು ನಾನು ಹೇಳಿದೆ. ಸಮಸ್ಯೆಯ ಶಾಂತಿಯುತ ಹಾಗೂ ಸೌಹಾರ್ದಯುತ ಇತ್ಯರ್ಥಕ್ಕೆ ನಾವು ಸಂಕಲ್ಪ ಕೈಗೊಂಡಿದ್ದೇವೆ. ರಾಮ ಮಂದಿರ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದರ ವಿಚಾರ ಮಾತನಾಡುವುದು ಸರಿಯಾಗದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಮತೀಯ ಸಾಮರಸ್ಯಕ್ಕೆ ಸಂಕಲ್ಪ ಕೈಗೊಂಡಿದ್ದೇವೆಯೇ ಹೊರತು ರಾಮ ಮಂದಿರ ನಿರ್ಮಾಣಕ್ಕಲ್ಲ,'' ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಈ ವಿವಾದಿತ ಸಂಕಲ್ಪ ಕೈಗೊಳ್ಳಲಾದ ಕಾರ್ಯಕ್ರಮ ಲಕ್ನೋ ವಿವಿಯ ಸಾರ್ವಜನಿಕ ಆಡಳಿತ ವಿಭಾಗದ ಸಭಾಂಗಣದಲ್ಲಿ ನಡೆದಿತ್ತಲ್ಲದೆ ಅದರ ಶೀರ್ಷಿಕೆ ‘ರಾಮ್ ಮಂದಿರ್ ನಿರ್ಮಾಣ್ : ಸಮಸ್ಯಾ ಏವಂ ಸಮಾಧಾನ್’ (ರಾಮ ಮಂದಿರ ನಿರ್ಮಾಣ : ಸಮಸ್ಯೆ ಮತ್ತು ಪರಿಹಾರ) ಎಂಬುದಾಗಿತ್ತು.