ನ್ಯಾ.ಲೋಯಾ ಸಾವು ಪ್ರಕರಣ: ಫೆ.5ಕ್ಕೆ ವಿಚಾರಣೆ ಮುಂದೂಡಿಕೆ
ಹೊಸದಿಲ್ಲಿ, ಫೆ.2: ಸಿಬಿಐ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ಪ್ರಕರಣದ ಕುರಿತ ಮುಂದಿನ ವಿಚಾರಣೆಯನ್ನು ಫೆ.5ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ಅಲ್ಲದೆ ಲೋಯಾ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದಂತೆ ಇತರ ಹೈಕೋರ್ಟ್ಗಳಿಗೆ ಸೂಚಿಸಿದೆ.
ಈ ಪ್ರಕರಣದ ಎರಡು ಮೊಕದ್ದಮೆಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 22ರಂದು ಬಾಂಬೆ ಹೈಕೋರ್ಟ್ನಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ನ್ಯಾ.ಲೋಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಹಾರಾಷ್ಟ್ರ ಸರಕಾರ ಉಚ್ಛನ್ಯಾಯಾಲಯದಲ್ಲಿ ಮಂಡಿಸಿತು. ಈ ಪ್ರಕರಣದಲ್ಲಿ ವ್ಯಕ್ತಪಡಿಸಲಾಗಿರುವ ಎಲ್ಲಾ ವಿಷಯಗಳೂ ಗಂಭೀರ ಸ್ವರೂಪದ್ದಾಗಿರುವ ಕಾರಣ,ಸಂಬಂಧಿತ ಎಲ್ಲಾ ದಾಖಲೆಪತ್ರಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ನ್ಯಾ. ಲೋಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರಗಳನ್ನೂ ಸಲ್ಲಿಸುವಂತೆ ಸೂಚಿಸಿತು.
ಕಾಂಗ್ರೆಸ್ ಮುಖಂಡ ತೆಹ್ಸೀನ್ ಪೂನಾವಾಲಾ ಮತ್ತು ಮಹಾರಾಷ್ಟ್ರ ಮೂಲದ ಪತ್ರಕರ್ತ ಬಿ.ಎಸ್.ಲೋನೆ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬಾಕಿಯಿದೆ. ಅಲ್ಲದೆ, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ಮಾಜಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಗೆ ನ್ಯಾ.ಲೋಯಾ ಸಾವಿನ ಪ್ರಕರಣದ ವಿಚಾರಣೆಯನ್ನು ಒಪ್ಪಿಸಬೇಕೆಂದು ಕೋರಿ ನೌಕಾಪಡೆಯ ಮಾಜಿ ಮುಖ್ಯಸ್ಥ ಲೆ ರಾಮ್ದಾಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ.