ಮಾವೋವಾದಿ ನಾಯಕ ಭದ್ರತಾ ಪಡೆಯ ಗುಂಡಿಗೆ ಬಲಿ

ಹೊಸದಿಲ್ಲಿ, ಪೆ. 2: ಜಾರ್ಖಂಡ್ನ ಲಟೇಹಾರ್ ಜಿಲ್ಲೆಯ ಗರು ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇತ್ತೀಚೆಗೆ ಬಿಹಾರ್-ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿ (ಬಿಜೆಎಸ್ಎಸಿ)ಗೆ ಸದಸ್ಯನ ರ್ಯಾಕ್ಗೆ ಪದೋನ್ನತಿ ಹೊಂದಿದ್ದ ಮಾವೋವಾದಿ ನಾಯಕ ಬಿರ್ಬಾಲ್ ಓರಾನ್ರನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ.
ಬೀರ್ಬಲ್ ತಲೆಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಜಿಲ್ಲೆಯ ಗರು ಪೊಲೀಸ್ ಠಾಣಾ ವ್ಯಾಪ್ತಿಯ ಭೀಟರ್ ಪಂದ್ರಾ ಗ್ರಾಮದ ಸಮೀಪ ಮಾವೋವಾದಿಗಳ ಚಲನವಲನದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಮಾವೊವಾದಿ ಬೀರ್ಬಲ್ ಓರಾನ್ ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
‘‘ಎರಡನೇ ಸುತ್ತಿನ ಎನ್ಕೌಂಟರ್ ನಿಲ್ಲಿಸಿದ ಬಳಿಕ ಬೀರ್ಬಲ್ ಮೃತದೇಹ ಪತ್ತೆಯಾಯಿತು. ಇದು ಶೋಧ ಕಾರ್ಯಾಚರಣೆಯಲ್ಲಿ ನಮಗೆ ಸಿಕ್ಕ ಯಶಸ್ಸು’’ ಎಂದು ಡಿಐಜಿ ವಿಫುಲ್ ಶುಕ್ಲಾ ಹೇಳಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಇತರ ಮಾವೋವಾದಿಗಳು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡ ಮಾವೋವಾದಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.