ಅತ್ಯಾಚಾರದಲ್ಲಿ ಲಿಂಗ ತಾರತಮ್ಯ ಬೇಡ ಎಂಬ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಪೆ. 2: ‘ಭಾರತೀಯ ದಂಡ ಸಂಹಿತೆಯಲ್ಲಿ ಅತ್ಯಾಚಾರದಂತಹ ನಿರ್ದಿಷ್ಟ ಅಪರಾಧದಲ್ಲಿ ಪುರುಷನನ್ನು ಮಾತ್ರ ಗುರಿಯಾಗಿರಿಸಲಾಗುತ್ತದೆ ಯಾಕೆ?, 375 ಬಿ ಕಲಂ ಅಡಿಯಲ್ಲಿ ಮಹಿಳೆಯರು ಅಪರಾಧ ಎಸಗಲು ಸಾಧ್ಯವಿಲ್ಲವೇ ?”
ಶುಕ್ರವಾರ ಬೆಳಗ್ಗೆ ದೂರುದಾರರೊಬ್ಬರಿಂದ ಸುಪ್ರೀಂ ಕೋರ್ಟ್ ಈ ಪ್ರಶ್ನೆ ಎದುರಿಸಿತು. ಈ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠದ ಎಲ್ಲ ನ್ಯಾಯಮೂರ್ತಿಗಳು, ಸಾಮಾಜಿಕ ಸನ್ನಿವೇಶಕ್ಕೆ ಅನುಗುಣವಾಗಿ ಸಂಸತ್ತಿನಲ್ಲಿ ಚರ್ಚಿಸಬಹುದು ಹಾಗೂ ವಸಾಹತುಶಾಹಿ ಪಿನಲ್ ಕೋಡ್ಗೆ ಪರಿಷ್ಕಾರ ತರಬಹುದು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
‘‘ಅಂದರೆ, ಮಹಿಳೆಯರು ಕೂಡ ಪುರುಷರನ್ನು ಹಿಂಬಾಲಿಸಬಹುದು ಎಂದು ಹೇಳುತ್ತೀರಿ. ಉತ್ತಮ. ಬದಲಾವಣೆಗೆ ಕಾನೂನು ಮುಕ್ತವಾಗಿದೆ. ಇದನ್ನು ಸಂಸತ್ತು ಪರಿಶೀಲಿಸಬೇಕು’’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅಭಿಪ್ರಾಯಿಸಿದರು.
ಅತ್ಯಾಚಾರಕ್ಕೆ ಇರುವ ಕಾಯ್ದೆ ‘ಮಹಿಳಾ ಸಂರಕ್ಷಕ’. ಮಹಿಳೆಯನ್ನು ಅಪರಾಧಿಯಾಗಿಸಲು ಇದನ್ನು ಬಳಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
‘‘ಮಹಿಳೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿರುವುದು ನೀವು ಎಲ್ಲಾದರೂ ನೋಡಿದ್ದೀರಾ ? ಅದಕ್ಕೆ ವಿಭಿನ್ನ ಕಲಂ ಇದೆ’’ ಎಂದು ದೀಪಕ್ ಮಿಶ್ರಾ ಪ್ರತಿಕ್ರಿಯಿಸಿದರು.
ಅತ್ಯಾಚಾರಕ್ಕೆ ಸಂಬಂಧಿಸಿದ ಪೀನಲ್ ಕೋಡ್ ಅಪರಾಧ ಎಸಗುವ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದ ದೂರುದಾರ ಹಾಗೂ ನ್ಯಾಯವಾದಿ ಆಗಿರುವ ರಿಷಿ ಮಲ್ಹೋತ್ರ ಪ್ರತಿಪಾದಿಸಿದರು.