ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ತಳಿ ಬಿಡುಗಡೆ: ಡಾ.ಜೆ.ವಿ.ಗೌಡ
ಧಾರವಾಡ, ಫೆ.1: ಸಂಶೋಧನೆಗಳು ಹವಾಮಾನಕ್ಕನುಗುಣವಾಗಿ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡುವ ದಿಶೆಯಲ್ಲಿ ಸಾಗಬೇಕು. ಇಂತಹ ಸಂಶೋಧನಾ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜೆ.ವಿ.ಗೌಡ ತಿಳಿಸಿದ್ದಾರೆ.
ಶುಕ್ರವಾರ ಕೃಷಿ ವಿಶ್ವವಿದ್ಯಾಲಯ, ಡಾ.ಎಸ್.ಡಬ್ಲೂ.ಮೆಣಸಿನಕಾಯಿ ಸ್ಮಾರಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಜೆನಿಟಿಕ್ಸ್ ಮತ್ತು ಸೈಟೋಜಿನೆಟಿಕ್ಸ್ ವೈಜ್ಞಾನಿಕ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕೃಷಿ ವಿಶ್ವವಿದ್ಯಾಲಯವು ಕೇವಲ 15-20 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿ ಈಗ ದೊಡ್ಡ ಮಟ್ಟದಲ್ಲಿ ಬೆಳೆದು ದೇಶದಲ್ಲಿಯೆ ಒಂದು ಮಾದರಿ ವಿಶ್ವ ವಿದ್ಯಾಲಯವಾಗಿ ಮಾರ್ಪಟ್ಟಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ತೋಟಗಾರಿಕಾ ವಿಭಾಗದ ನಿವೃತ್ತ ಉಪ ಮಹಾ ನಿರ್ದೇಶಕ ಡಾ.ಎನ್.ಕೆ. ಕೃಷ್ಣ ಕುಮಾರ್ ಮಾತನಾಡಿ, ಈಗ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಯಲ್ಲಿ 800-1000 ಮೀಟರ್ ಆಳ ತೆಗೆದರೂ ನೀರು ಸಿಗುತ್ತಿಲ್ಲ, ನೀರು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಬಾಳೆ ಬೆಳೆಯಲ್ಲಿ ಫಿಜೋರಿಯಂ ವಿಲ್ಟ್ ಎಂಬ ರೋಗಾಣು ಈಗಾಗಲೇ ಭಾರತದಲ್ಲಿ ಮತ್ತೆ ಕಂಡು ಬಂದಿದೆ. ಅದರ ನಿರ್ವಹಣೆ ವಿಜ್ಞಾನಿಗಳಿಗೆ ಒಂದು ಸವಾಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ನಿರ್ದೇಶಕ ಡಾ.ಬಿ.ಎಸ್.ಜನಗೌಡರ ಮಾತನಾಡಿ, ಕೃಷಿ ವಿಶ್ವವಿದ್ಯಾಲಯದ ಶಿಕ್ಷಣವು ಉತ್ತಮವಾಗಿದೆ. ಈಗ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ 2000ಕ್ಕೂ ಹೆಚ್ಚಾಗಿದೆ. ‘ಶಿಕ್ಷಣ ವಿನಿಮಯ’ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷಕ್ಕೆ ನಮ್ಮ ವಿವಿಯ 25 ವಿದ್ಯಾರ್ಥಿಗಳನ್ನು ಹೊರದೇಶಗಳಿಗೆ ಜ್ಞಾನ ವಿನಿಮಯಕ್ಕಾಗಿ ಕಳುಹಿಸಲಾಗುತ್ತಿದೆ. ಮತ್ತು ದೇಶದಲ್ಲಿಯೆ ನಮ್ಮ ವಿಶ್ವವಿದ್ಯಾಲಯವು ಮಾದರಿ ವಿಶ್ವವಿದ್ಯಾಲಯವಾಗಿ ುರುತಿಸಲ್ಪಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಜಾಬ್ ವಿವಿಯ ಡಾ.ಗುರುದೇವ್‌ಸಿಂಗ್ ಖುಶ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ, ಅಭಿನಂದಿಸಲಾಯಿತು.
ಕಾರ್ಯಾಗಾರದಲ್ಲಿ ರಾಯಚೂರ ಕೃಷಿ ವಿವಿಯ ಕುಲಪತಿ ಡಾ.ಪಿ.ಎಂ.ಸಾಲಿಮಠ, ಮಾಜಿ ಕುಲಪತಿಗಳಾದ ಡಾ.ಜೆ.ಎಚ್.ಕುಲಕರ್ಣಿ, ಡಾ. ಎಚ್.ಬಸಪ್ಪ, ಡಾ.ಆರ್.ಎಸ್.ಗಿರಡ್ಡಿ, ಡಾ.ವಿ.ಆರ್.ಬೆಣಗಿ, ಡಾ.ಎಸ್.ಟಿ. ನಾಯಕ, ಡಾ.ಸುರೇಖಾ ಸಂಕನಗೌಡರ, ಡಾ.ಎಸ್.ಟಿ.ಕಜ್ಜಿಡೋಣಿ ಮತ್ತು ವಿವಿಯ ಇನ್ನಿತರ ಅಧಿಕಾರಿಗಳು ಭಾಗವಸಿದ್ದರು.







