ಬರ ನಿರ್ವಹಣೆ: ಮಾರ್ಚ್ 8ರಿಂದ ರಾಷ್ಟ್ರೀಯ ಸಮಾವೇಶ
ಬೆಂಗಳೂರು, ಫೆ. 2: ಬರ ನಿರ್ವಹಣಾ ವಿಧಾನಗಳ ಬಗ್ಗೆ ಮಾರ್ಚ್ 8ರಿಂದ ಎರಡು ದಿನಗಳ ಕಾಲ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ.
ಶುಕ್ರವಾರ ತನ್ನ ಕಚೇರಿಯಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಇತರ ರಾಜ್ಯಗಳೂ ಸೇರಿದಂತೆ ಒಟ್ಟು 250 ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಇಲ್ಲಿ ವಿಪತ್ತು ಹಾಗೂ ಬರ ನಿರ್ವಹಣೆಯ ಉತ್ತಮ ವಿಧಾನಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ ಎಂದರು.
ಕಂದಾಯ, ಪಶುಸಂಗೋಪನೆ, ಜಲಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ, ರೇಶ್ಮೆ, ಸಣ್ಣ ನೀರಾವರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳು, ಕೃಷಿ ವಿಶ್ವ ವಿದ್ಯಾಲಯ, ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಈ ಸಮಾವೇಶದಲ್ಲಿ ಕೈಜೋಡಿಸಲಿವೆ ಎಂದು ಅವರು ತಿಳಿಸಿದರು.
ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸಂಚಾಲಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ಮಾತನಾಡಿ, ಕರ್ನಾಟಕ 13 ವರ್ಷಗಳಿಂದ ಬರ ಅನುಭವಿಸುತ್ತಿದೆ. ಕೆಲವು ತಾಲೂಕುಗಳು ಸತತ 5 ವರ್ಷಗಳಿಂದ ಬರ ಪೀಡಿತವಾಗಿವೆ. ರಾಜ್ಯದ ಶೇ.70ರಷ್ಟು ಪ್ರದೇಶ ಬರಸೂಕ್ಷ್ಮ ಎಂದು ಗುರುತಿಸಲಾಗಿದೆ. ಇದರ ನಿರ್ವಹಣೆಗೆ ನೂತನ ಆವಿಷ್ಕಾರಗಳು, ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಸಮಾವೇಶವು ಬರ ನಿರ್ವಹಣೆಯ ಹೊಸ ಮಾರ್ಗಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದರು.







