ಅಮಿತ್ ಶಾ ಸುಳ್ಳಿನ ಚಕ್ರವರ್ತಿ: ದಿನೇಶ್ ಗುಂಡೂರಾವ್

ಬೆಂಗಳೂರು, ಫೆ.3: ಕೇಂದ್ರ ಸರಕಾರವು ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ.ಗಳ ಅನುದಾನ ನೀಡಿರುವುದಾಗಿ ಪದೇ ಪದೇ ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಸುಳ್ಳಿನ ಚಕ್ರವರ್ತಿ, ಸುಳ್ಳಿನ ಸಾರ್ವಭೌಮನೆಂದು ಕರೆಯಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಎಚ್ಚರಿಕೆ ನೀಡಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ರವಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸರಕಾರವು ರಾಜ್ಯಕ್ಕೆ ನೀಡಿರುವ ಅನುದಾನದ ಬಗ್ಗೆ ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರಮೋದಿ, ಈ ಬಗ್ಗೆ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಸ್ಪಷ್ಟೀಕರಣ ನೀಡದಿದ್ದರೆ ಸುಳ್ಳುಗಾರರಿಗೆ ರಕ್ಷಣೆ ನೀಡುವ, ಕರ್ನಾಟಕಕ್ಕೆ ಅಗೌರವ, ಅನ್ಯಾಯ ಮಾಡುವ ಪ್ರಧಾನಿ ಎಂದು ಅವರನ್ನು ಕರೆಯಬೇಕಾಗುತ್ತದೆ. ಅಲ್ಲದೆ, ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಇಷ್ಟು ಕೋಟಿ ಅನುದಾನ ನೀಡುತ್ತೇವೆ, ಅಷ್ಟು ಕೋಟಿ ಅನುದಾನ ನೀಡುತ್ತೇವೆ ಎಂಬ ಹೇಳಿಕೆಗಳನ್ನು ನೀಡಬೇಡಿ. ಬಿಹಾರದಲ್ಲಿ ನೀವು ನೀಡಿದ ಸುಳ್ಳು ಭರವಸೆ ಎಲ್ಲರಿಗೂ ಗೊತ್ತಿದೆ ಎಂದು ಅವರು ಟೀಕಿಸಿದರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎಂದಿಗೂ ಮೂರು ಲಕ್ಷ ಕೋಟಿ ರೂ.ಗಳ ಅನುದಾನ ಬಂದಿಲ್ಲ. ಆದರೂ, ಅಮಿತ್ ಶಾ ಇಲ್ಲಿಗೆ ಬಂದಾಗಲೆಲ್ಲ ಕೇಂದ್ರದಿಂದ ರಾಜ್ಯಕ್ಕೆ ನೀಡಿರುವ ಅನುದಾನದ ಲೆಕ್ಕ ಕೇಳುತ್ತಿರುತ್ತಾರೆ. ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಹೊರತುಪಡಿಸಿ, ಸಂವಿಧಾನ ಬದ್ಧ ಹುದ್ದೆಯಲ್ಲಿ ಇಲ್ಲದ ವ್ಯಕ್ತಿಯೊಬ್ಬರು ಕೇಳುವ ಲೆಕ್ಕಕ್ಕೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸಂವಿಧಾನಾತ್ಮಕವಾಗಿ ರಾಜ್ಯಗಳಿಗೆ ಬರಬೇಕಾದ ಹಕ್ಕಿನ ಅನುದಾನವನ್ನು ಕೇಂದ್ರ ಸರಕಾರ ನೀಡುತ್ತದೆ. ಆದರೆ, ಬಿಜೆಪಿಯವರು ಅದನ್ನು ದಾನದ ರೂಪದಲ್ಲಿ ಪರಿಗಣಿಸುತ್ತಿದ್ದಾರೆ. ನಮ್ಮ ರಾಜ್ಯದಿಂದ ಸಂಗ್ರಹಿಸುವ ತೆರಿಗೆ ಪೈಕಿ ನಮಗೆ ಹಂಚಿಕೆ ಮಾಡುವ ಅನುದಾನ ನಮ್ಮ ಹಕ್ಕಾಗಿದೆಯೇ ಹೊರತು, ಬಿಜೆಪಿ ನೀಡುವ ದಾನವಲ್ಲ ಎಂದು ಅವರು ತಿಳಿಸಿದರು.
ಕೃಷಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ದೇಶಕ್ಕೆ ನಾವು ಕಟ್ಟುವ ತೆರಿಗೆಯಲ್ಲಿ ಕೇಂದ್ರ ಸರಕಾರ ನಡೆಯುತ್ತಿದೆ. ಇತರ ಹಿಂದುಳಿದ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟು ನಾವು ಬಾಳುತ್ತಿದ್ದೇವೆ. ನಮ್ಮ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಇರುವ ಅಜ್ಞಾನದಿಂದ ಅಮಿತ್ ಶಾ ಹೊರ ಬರಲಿ ಎಂದು ವ್ಯಂಗ್ಯವಾಡಿದರು.
ಕನ್ನಡಿಗರು ಬಿಜೆಪಿಯವರಿಂದ ಔದಾರ್ಯ ಬಯಸುತ್ತಿಲ್ಲ. ನಮ್ಮ ತೆರಿಗೆ ಹಣದಿಂದ ಹಿಂದುಳಿದ ರಾಜ್ಯಗಳ ಅಭಿವೃದ್ಧಿಯಾಗುತ್ತಿರುವುದನ್ನು ಕನ್ನಡಿಗರಾಗಿ ನಾವು ಹೆಮ್ಮೆ ಪಡುತ್ತೇವೆ. ಆದರೆ, ಸುಳ್ಳು ಹೇಳಿಕೆಗಳನ್ನು ನೀಡಿ ನಮ್ಮ ಸ್ವಾಭಿಮಾನವನ್ನು ಕೆಣಕುವುದು ಬೇಡ ಎಂದು ಕೃಷ್ಣಭೈರೇಗೌಡ ಎಚ್ಚರಿಕೆ ನೀಡಿದರು.
ಪ್ರಧಾನಿ ಬೆಂಗಳೂರಿಗೆ ಬಂದಾಗ 14ನೆ ಹಣಕಾಸು ಆಯೋಗ ನಮ್ಮ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನದ ಆದೇಶ ಪ್ರತಿಗಳನ್ನು ಸಾರ್ವಜನಿಕರ ಮುಂದಿಡಲಿ. ಇಲ್ಲದಿದ್ದರೆ, ಅಮಿತ್ ಶಾ ನೀಡಿರುವ ಸುಳ್ಳು ಹೇಳಿಕೆಗೆ ಕ್ಷಮೆ ಕೋರಿ, ನಮ್ಮ ರಾಜ್ಯಕ್ಕೆ ಬರಬೇಕಿರುವ 10,553 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲಿ ಎಂದು ಅವರು ಆಗ್ರಹಿಸಿದರು.
ಕೇಂದ್ರದಿಂದ ರಾಜ್ಯಕ್ಕೆ 14ನೆ ಹಣಕಾಸು ಆಯೋಗದಂತೆ ಐದು ವರ್ಷದಲ್ಲಿ 2,02,370 ಕೋಟಿ ರೂ. ಅನುದಾನ ಬರಬೇಕು, ಈಗಾಗಲೇ ಆಯೋಗ 3 ವರ್ಷ ಅವಧಿ ಪೂರೈಸಿದೆ. ಈ ಅವಧಿಯಲ್ಲಿ 95,204 ಕೋಟಿ ರೂ. ಅನುದಾನ ನೀಡಬೇಕಿತ್ತು. ಆದರೆ 84,651 ಕೋಟಿ ರೂ. ಮಾತ್ರ ಅನುದಾನ ನೀಡಲಾಗಿದೆ. ಇನ್ನು 10,553 ಕೋಟಿ ರೂ. ಬಾಕಿ ಇದೆ ಎಂದು ಕೃಷ್ಣಭೈರೇಗೌಡ ಹೇಳಿದರು.
2015-16ನೆ ಸಾಲಿನಲ್ಲಿ 27,302 ಕೋಟಿ ಬದಲಾಗಿ, 23,983 ಕೋಟಿ ರೂ. ನೀಡಲಾಗಿದೆ(3,319 ಕೋಟಿ ರೂ. ಬಾಕಿ). 2016-17ನೆ ಸಾಲಿನಲ್ಲಿ 31,503 ಕೋಟಿ ಬದಲಾಗಿ, 28,761 ಕೋಟಿ ರೂ.ನೀಡಲಾಗಿದೆ(2,743 ಕೋಟಿ ಬಾಕಿ). 2017-18ನೆ ಸಾಲಿನಲ್ಲಿ 36,399 ಕೋಟಿ ರೂ.ಬದಲು, 31,908 ಕೋಟಿ ನೀಡಲಾಗಿದೆ(4,491 ಕೋಟಿ ಬಾಕಿ). ಒಟ್ಟಾರೆಯಾಗಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ 95,204 ಕೋಟಿ ರೂ.ಗಳ ಪೈಕಿ 84,651 ಕೋಟಿ ರೂ. ಹಂಚಿಕೆಯಾಗಿದೆ. 10,553 ಕೋಟಿ ರೂ.ಗಳು ಬರಬೇಕಿದೆ ಎಂದು ಅವರು ಹೇಳಿದರು.
13ನೆ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗುತ್ತಿದ್ದ ಹಣದಲ್ಲಿ ಶೇ.98.5ರಷ್ಟು ಬಿಡುಗಡೆ ಆಗುತ್ತಿತ್ತು. ಆದರೆ, 14ನೆ ಹಣಕಾಸು ಆಯೋಗದಲ್ಲಿ ಮೂರು ವರ್ಷಗಳಲ್ಲೇ ನಮಗೆ ಶೇ.11ರಷ್ಟು ಅನುದಾನ ಕೊರತೆಯಾಗಿದೆ. ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಕರ್ನಾಟಕವು ದೇಶಕ್ಕೆ ಶೇ.9.47ರಷ್ಟು ತೆರಿಗೆ ಪಾವತಿಸುತ್ತಿದೆ. ಆದರೆ, ನಮಗೆ ಹಣಕಾಸು ಆಯೋಗ ಹಂಚಿಕೆ ಮಾಡುತ್ತಿರುವುದು ಶೇ.4.713ರಷ್ಟು ಎಂಬುದನ್ನು ಸ್ಪಷ್ಪಪಡಿಸಿದೆ ಎಂದು ಅವರು ಹೇಳಿದರು.







