'ಅನಿಲ ಭಾಗ್ಯ' ಯೋಜನೆ: 27 ಲಕ್ಷ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್

ಬೆಂಗಳೂರು, ಫೆ. 3: ರಾಜ್ಯ ಸರಕಾರದ ‘ಅನಿಲ ಭಾಗ್ಯ’ ಯೋಜನೆಯಡಿ 27ಲಕ್ಷ ಫಲಾನುಭವಿಗಳು ಶೀಘ್ರದಲ್ಲೇ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದ್ದು, ತಮ್ಮ ಅಡುಗೆ ಕೋಣೆಗಳ್ನು ಹೊಗೆ ರಹಿತವಾಗಿಸಿಕೊಳ್ಳಲಿದ್ದಾರೆ.
ಮೊದಲ ಹಂತದಲ್ಲಿ 10ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಈಗಾಗಲೇ ಮುಖ್ಯಮಂತ್ರಿಯ ಪತ್ರ ರವಾನಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ಯೋಜನೆ ಎಲ್ಲಾ ಫಲಾನುಭವಿಗಳಿಗೆ ಮುಟ್ಟಲಿದೆ. ಕಟ್ಟಡ ನಿರ್ಮಾಣದಲ್ಲಿರುವ ಕಾರ್ಮಿಕರನ್ನು ಆಯ್ಕೆ ಮಾಡಲು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಆಹಾರ ಇಲಾಖೆ ಫಲಾನುಭವಿಗಳನ್ನು ಆಯ್ಕೆ ಮಾಡಲಿದ್ದು, ಆಹಾರ ಮತ್ತು ನಾಗರಿಕ ಪೂರೈಕೆಗಳ ಇಲಾಖೆ ಈ ಯೋಜನೆಯ ನೋಡಲ್ ಏಜೆನ್ಸಿಯಾಗಿರುತ್ತದೆ ಎಂದು ತಿಳಿಸಲಾಗಿದೆ.
ಪ್ರತಿ ಮನೆಗೆ ಅನಿಲ ಸಂಪರ್ಕ ಕಲ್ಪಿಸುವ ವೆಚ್ಚ 4,040 ರೂ.ಗಳನ್ನು ಸರಕಾರವೇ ಭರಿಸುತ್ತದೆ. ಇದರಲ್ಲಿ ಅವರಿಗೆ ಗ್ಯಾಸ್ ಸ್ಟವ್, ಲೈಟರ್ ಮತ್ತು ಎಲ್ಪಿಜಿ ಸಂಪರ್ಕ ನೀಡಲಾಗುತ್ತದೆ. ಎರಡು ಸಿಲಿಂಡರ್‌ಗಳು ಒಂದು ಸಂಪರ್ಕ ಪಡೆಯುವಾಗ ಮತ್ತು ಇನ್ನೊಂದು ರೀಫಿಲ್ ಮಾಡುವ ವೇಳೆ ನೀಡಲಾಗುತ್ತದೆ.
ಮೊದಲ ಎರಡು ಸಿಲಿಂಡರ್‌ಗಳ ನಂತರ ಹೆಚ್ಚುವರಿ ಸಿಲಿಂಡರ್ ಬುಕಿಂಗ್‌ಗೆ ಫಲಾನುಭವಿಗಳೇ ಹಣ ತುಂಬಬೇಕು. ಎಲ್ಲ ಫಲಾನುಭವಿಗಳನ್ನು ಪಡಿತರ ಚೀಟಿಗಳ ಮೂಲಕ ಗುರುತಿಸಲಾಗಿದೆ ಮತ್ತು ಅಂತ್ಯೋದಯ ಯೋಜನೆಯಡಿ ಬರುವವರು ಮತ್ತು ಗ್ಯಾಸ್ ಸಿಲಿಂಡರ್‌ಗಳನ್ನು ಹೊಂದದವರಿಗೆ ಆದ್ಯತೆ ನೀಡಲಾಗಿದೆ.
ಅಲ್ಲದೆ ಫಲಾನುಭವಿಗಳು ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಆಯ್ಕೆಯಾಗಿರಬಾರದು. ಅನಿಲ ಭಾಗ್ಯ ಯೋಜನೆಯಡಿ ಬರುವವರಿಗೆ ನಿಯಮಿತ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆ-94488 49503ಅನ್ನು ಸಂಪರ್ಕಿಸಲು ಕೋರಲಾಗಿದೆ.







