ಮುಸ್ಲಿಮರ ವಿರುದ್ಧದ ದ್ವೇಷ ವಾತಾವರಣ ಆತಂಕಕಾರಿ: ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು, ಫೆ. 3: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದ್ವೇಷ ವ್ಯಕ್ತಪಡಿಸುವ ವಾತಾವರಣ ನಿರ್ಮಾಣವಾಗುತ್ತಿರುವುದು ಸಂವಿಧಾನದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಕಳವಳ ವ್ಯಕ್ತಪಡಿಸಿದರು.
ಶನಿವಾರ ನಗರದ ಸೆನೆಟ್ ಹಾಲ್‌ನಲ್ಲಿ ಕರ್ನಾಟಕ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳು’ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಎಲ್ಲ ಧರ್ಮ, ಜಾತಿಗಳು ಸಾಮರಸ್ಯವಾಗಿ ಬದುಕಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದ್ವೇಷ ವ್ಯಕ್ತಪಡಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಧ್ವನಿ ಎತ್ತುವವರನ್ನು ಚಿವುಟಿ ಹಾಕುವ ಪ್ರವೃತ್ತಿ ಬೆಳೆಯುತ್ತಿದೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಜಾಗತೀಕರಣ ಪ್ರಭಾವದಿಂದ ಹಿಂದುಳಿದ ವರ್ಗದ ಜನತೆಗೆ ಅತಿದೊಡ್ಡ ಪೆಟ್ಟು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಭಾರತ ವಿಶ್ವದ ಅತಿದೊಡ್ಡ 6ನೆ ಶ್ರೀಮಂತರಾಷ್ಟ್ರ ಎಂಬ ವರದಿ ಪ್ರಕಟವಾಗಿತ್ತು. ದೇಶದಲ್ಲಿರುವ 2 ಸಾವಿರ ಶ್ರೀಮಂತರನ್ನು ಪರಿಗಣಿಸಿ ಶ್ರೀಮಂತ ರಾಷ್ಟ್ರ ಎನ್ನುವುದಾದದರೆ, ಗ್ರಾಮೀಣ ಭಾಗದ ಜನಸಾಮಾನ್ಯರ ಕಷ್ಟ ಕೇಳುವವರ್ಯಾರು ಎಂದು ಸಿಂಧ್ಯಾ ಪ್ರಶ್ನಿಸಿದರು.
ಬಡವರು ಶ್ರೀಮಂತರ ನಡುವೆ ಅತಿದೊಡ್ಡ ಕಂದಕವನ್ನು ಸರಿದೂಗಿಸಲು ಸರಕಾರಗಳು ದುಡಿಯುವ ಕೈಗಳಿಗೆ ಕೆಲಸ ನೀಡಿ, ಬಡವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಸಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾವೇದಿಕೆ ರಾಜ್ಯಾಧ್ಯಕ್ಷ ಕೃಷ್ಣಾನಾಯಕ್ ಮಾತನಾಡಿ, ರಾಜ್ಯದಲ್ಲಿ ಮೀಸಲಾತಿ ಇದ್ದರೂ ಸಹ ಸಣ್ಣ ಸಣ್ಣ ಜಾತಿಗಳಾದ ದೇವಾಂಗ, ಕುರುಹೀನಶೆಟ್ಟಿ, ಭಾವಸಾರ ಸೇರಿದಂತೆ ಅನೇಕ ಜಾತಿಗಳಿಗೆ ಮೀಸಲಾತಿ ಕನಸಾಗಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿಯಿಂದ ಅಧಿಕಾರ ಪಡೆವ ಸ್ವಾರ್ಥ ರಾಜಕಾರಣಿಗಳು ನಂತರ ತಮ್ಮ ಜನಾಂಗಗಳ ಏಳಿಗೆಯನ್ನು ಮರೆಯುತ್ತಿರುವುದು ವಿಷಾದನೀಯ. ಸಮುದಾಯವನ್ನು ಪ್ರತಿನಿಧಿಸುವ ನಾಯಕರೇ ಸಮಸ್ಯೆಯನ್ನು ಬಗೆಹರಿಸಿ ಸಾಮಾಜಿಕ ನ್ಯಾಯ ಒದಗಿಸದಿದ್ದಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ. ಹೀಗಾಗಿ ಸಮಾಜದ ಏಳಿಗೆ ಬಗ್ಗೆ ಸಮಗ್ರ ಚಿಂತನೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜು ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ದಲಿತ ಕಾರ್ಮಿಕ ಮುಖಂಡ ಎಂ.ಶ್ರೀನಿವಾಸಯ್ಯ, ವೇದಿಕೆ ಪ್ರಧಾನ ಕಾರ್ಯದರ್ಶಿ ಎ.ಕೆ.ಕರುಣಾಕರ, ಮಹಿಳಾ ಘಟಕ ಗೌರವಾಧ್ಯಕ್ಷೆ ಲಕ್ಷ್ಮಿಬಾಯಿ ಪವಾರ್ ಸೇರಿದಂತೆ ಪ್ರಮುಖರಿದ್ದರು.







