ತರಾತುರಿಯಲ್ಲಿ ವಿಧೇಯಕ ಮಂಡನೆಗೆ ಅವಕಾಶವಿಲ್ಲ: ಸ್ಪೀಕರ್ ಕೆ.ಬಿ.ಕೋಳಿವಾಡ

ಬೆಂಗಳೂರು, ಫೆ. 3: ‘ನೈಸ್’ ಅಕ್ರಮ, ವಿದ್ಯುತ್ ಖರೀದಿಯಲ್ಲಿನ ಅಕ್ರಮ ಹಾಗೂ ಕೆರೆ ಒತ್ತುವರಿ ಸಂಬಂಧದ ಸದನ ಸಮಿತಿ ವರದಿ ಶಿಫಾರಸುಗಳ ಜಾರಿಗೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗುವುದೆಂದು ವಿಧಾನಸಭಾ ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಕಾರ್ಯ ವಿಧಾನ ಮತ್ತು ನಡಾವಳಿಯನ್ನು ರೂಪಿಸುವ ವೇಳೆ ಸದನ ಸಮಿತಿ ವರದಿಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿ ಸರಕಾರ ತನ್ನ ನಿಲುವನ್ನು ಪ್ರಕಟಿಸಬೇಕೆಂದು ಸಲಹೆ ನೀಡುತ್ತೇವೆ ಎಂದರು.
ತರಾತುರಿ ಮಂಡನೆ ಸಲ್ಲ: ಅಧಿವೇಶನ ಕೊನೆ ದಿನ ತರಾತುರಿಯಲ್ಲಿ ಸರಕಾರ ವಿಧೇಯಕಗಳ ಮಂಡನೆ ಸರಿಯಲ್ಲ. ಇದಕ್ಕೆ ಅವಕಾಶ ನೀಡುವುದಿಲ್ಲ, ಮೊದಲೇ ವಿಧೇಯಕಗಳನ್ನು ಮಂಡಿಸಿ ಚರ್ಚೆಗೆ ಕಾಲಾವಕಾಶ ಕಲ್ಪಿಸಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು.
ಕೆರೆ ಒತ್ತುವರಿ ತೆರವು ಸಂಬಂಧ ತನ್ನ ಅಧ್ಯಕ್ಷತೆಯ ಸದನ ಸಮಿತಿ ಮಹತ್ವದ ವರದಿಯನ್ನು ನೀಡಿದೆ. ಆದರೆ, ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇಲ್ಲ. ರಾಜ್ಯ ಸರಕಾರ ಸದನ ಸಮಿತಿ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ವರದಿ ಅನುಷ್ಠಾನದ ಬಗ್ಗೆ ಸದನಕ್ಕೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ತೃಪ್ತಿ ತಂದಿಲ್ಲ: ಕೆಲ ಶಾಸಕರು ಚರ್ಚೆಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡರೆ, ಕೆಲ ಸದಸ್ಯರು ಕ್ಷೇತ್ರಕ್ಕೆ ಸೀಮಿತವಾಗಿ ಚರ್ಚಿಸಿದ್ದಾರೆ. ಇನ್ನು ಕೆಲ ಹಿರಿಯರು ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕಲಾಪದಲ್ಲಿ ಶಾಸಕರ ಪಾಲ್ಗೊಳ್ಳುವಿಕೆ ತೃಪ್ತಿ ತಂದಿಲ್ಲ. ಆದರೆ, ಸರಕಾರ ಬಜೆಟ್‌ನಲ್ಲಿ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದೆ ಎಂಬ ಸಮಾಧಾನವಿದೆ ಎಂದರು.
ಜಂಟಿ ಅಧಿವೇಶನ: ಫೆ.5ರ ಬೆಳಗ್ಗೆ 11ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಅದೇ ದಿನ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಲಾಗುವುದು. ಫೆ.9ರ ವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.
ಫೆ.16ರ ಬೆಳಗ್ಗೆ 11.30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯ ಮಂಡಿಸಲಿದ್ದು, ಫೆ.28ರ ವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಈ ವರೆಗೂ 900 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಆಪೈಕಿ 60 ಪ್ರಶ್ನೆಗಳು ಚುಕ್ಕಿ ಗುರುತಿನ ಪ್ರಶ್ನೆಗಳಾಗಿವೆ ಎಂದರು.
‘ವರ್ಷಕ್ಕೆ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂಬ ನಿಯಮವಿದೆ. ಆದರೆ, 2013ರಿಂದ ಈವರೆಗೂ 221 ದಿನಗಳಷ್ಟೇ ಕಲಾಪ ನಡೆದಿದ್ದು, ಹೆಚ್ಚಿನ ದಿನಗಳ ಅಧಿವೇಶನ ಕಲಾಪ ನಡೆಯಬೇಕೆಂಬುದು ನನ್ನ ಬಯಕೆ’
-ಕೆ.ಬಿ.ಕೋಳಿವಾಡ ವಿಧಾನಸಭಾ ಸ್ಪೀಕರ್







