ಭಾರತ ನಿರ್ಮಿತ ತೇಜಸ್ ಯುದ್ಧವಿಮಾನ ಹಾರಿಸಿದ ಯುಎಸ್ ವಾಯುಪಡೆ ಮುಖ್ಯಸ್ಥ

ಹೊಸದಿಲ್ಲಿ, ಫೆ.3: ಭಾರತೀಯ ಮತ್ತು ಅಮೆರಿಕದ ವಾಯುಪಡೆಗಳ ಮಧ್ಯೆ ಸಂಬಂಧವನ್ನು ವೃದ್ಧಿಸುವ ದೃಷ್ಟಿಯಿಂದ ಶನಿವಾರದಂದು ಯುಎಸ್ ವಾಯುಪಡೆಯ ಮುಖ್ಯಸ್ಥ ಜನರಲ್ ಡೇವಿಡ್ ಎಲ್. ಗೋಲ್ಡ್‌ಫೀನ್ ಅವರು ಜೋಧ್‌ಪುರದಲ್ಲಿರುವ ವಾಯುಪಡೆಯ ನೆಲೆಯಲ್ಲಿ ಭಾರತ ನಿರ್ಮಿತ ಹಗುರವಾದ ಯುದ್ಧವಿಮಾನ ತೇಜಸ್‌ಅನ್ನು ಹಾರಿಸಿದರು.
ಆಮೂಲಕ ಗೋಲ್ಡ್‌ಫೀನ್ ಭಾರತ ನಿರ್ಮಿಸಿರುವ ತೇಜಸ್ ಯುದ್ಧವಿಮಾನವನ್ನು ಹಾರಿಸಿದ ಮೊಟ್ಟಮೊದಲ ವಿದೇಶಿ ಸೇನಾ ಮುಖ್ಯಸ್ಥ ಎಂದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಾಯುಪಡೆ, ಯುಎಸ್ ವಾಯುಪಡೆಯ ಮುಖ್ಯಸ್ಥರಾದ ಜನರಲ್ ಡೇವಿಡ್ ಎಲ್. ಗೋಲ್ಡ್‌ಫೀನ್ ಅವರು ಭಾರತಕ್ಕೆ ಭೇಟಿ ನೀಡಿದ್ದು ಶನಿವಾರದಂದು ಜೋಧ್‌ಪುರದಲ್ಲಿ ಸ್ವದೇಶಿ ನಿರ್ಮಿತ ತೇಜಸ್ ಯುದ್ಧವಿಮಾನವನ್ನು ಹಾರಿಸಿದ್ದಾರೆ ಎಂದು ತಿಳಿಸಿದೆ.
ಜನರಲ್ ಗೋಲ್ಡ್‌ಫೀನ್ ಹಾಗೂ ಯುಎಸ್ ಪೆಸಿಫಿಕ್ ವಾಯುಪಡೆಯ ಕಮಾಂಡರ್ ಟೆರೆನ್ಸ್ ಒಶೌಗ್ನೆಸಿಯವರು ಫೆಬ್ರವರಿ ಒಂದರಂದು ಭಾರತಕ್ಕೆ ಆಗಮಿಸಿದ್ದಾರೆ. ಅವರಿಗೆ ಸ್ವಾಗತಕೋರಿ ಹೊಸದಿಲ್ಲಿಯಲ್ಲಿರುವ ವಾಯುಪಡೆಯ ಮುಖ್ಯಕಚೇರಿಯಲ್ಲಿ ಗೌರವ ರಕ್ಷೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ ಇಬ್ಬರು ಅಧಿಕಾರಿಗಳು ಭಾರತೀಯ ವಾಯುಪಡೆಯ ಮುಖ್ಯಸ್ಥರಾದ ಬಿ.ಎಸ್ ಧನೊವಾ ಜೊತೆ ಸಮಾಲೋಚನೆ ನಡೆಸಿದರು.
ಭಾರತ ಭೇಟಿ ಹಾಗೂ ಇಲ್ಲಿ ಸಿಕ್ಕ ಅದ್ಧೂರಿ ಸ್ವಾಗತದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಜನರಲ್ ಗೋಲ್ಟ್‌ಫೀನ್, ಇಂಥ ಅಭೂತರ್ಪರ್ವ ಸ್ವಾಗತಕ್ಕಾಗಿ ಕೃತಜ್ಞತೆಗಳು. ಭಾರತ ಮತ್ತು ಯುಎಸ್ ವಾಯುಪಡೆಗಳ ನಡುವಿನ ಸಂಬಂಧ ವೃದ್ಧಿಸಲು ನಾವು ಎದುರು ನೀಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.







