ಕೇಂದ್ರದ ಅನುದಾನದ ಬಗ್ಗೆ ಕಾಂಗ್ರೆಸ್ ವಿತಂಡವಾದ: ಯಡಿಯೂರಪ್ಪ

ಬೆಂಗಳೂರು, ಫೆ.3: ಜನರ ದುಡ್ಡನ್ನು ಖರ್ಚು ಮಾಡಿ, ಕಾಂಗ್ರೆಸ್ ಋಣ ತೀರಿಸಿ ಎಂದು ಕರೆ ಕೊಡುವ ಮೂರ್ಖ ಮುಖಂಡರನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ನಿಜಬಣ್ಣ ಜನರಿಗೆ ತಿಳಿದಿದೆ. 14ನೆ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದ ಅನುದಾನದ ಪ್ರಮಾಣ ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಿರುವುದು ಎನ್‌ಡಿಎ ಸರಕಾರದ ಕೊಡುಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇದರಿಂದಾಗಿ, 2010 ರಿಂದ 2015ರ ವರೆಗಿನ 13ನೇ ಹಣಕಾಸು ಆಯೋಗದಲ್ಲಿ ಯುಪಿಎ ಸರಕಾರ ಇದ್ದಾಗ ರಾಜ್ಯಕ್ಕೆ ಬಿಡುಗಡೆಯಾದ ಒಟ್ಟು ಮೊತ್ತ 73,209 ಕೋಟಿ ರೂ.ಗಳು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2014-15ರಿಂದ 2017-18ನೆ ಸಾಲಿನ ನವೆಂಬರ್‌ವರೆಗೆ ಬಿಡುಗಡೆ ಮಾಡಿದ ಒಟ್ಟು ಮೊತ್ತ 1,35,089 ಕೋಟಿ ರೂ.ಗಳು. ಮೋದಿ ಸರಕಾರ ಕೇವಲ 3 ವರ್ಷದಲ್ಲಿ ಯುಪಿಎ ಸರಕಾರಕ್ಕಿಂತ ಎರಡು ಪಟ್ಟು ಅನುದಾನ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದ್ದಾರೆ.
14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಅನುಮೋದನೆ ಆದ ಒಟ್ಟು ಮೊತ್ತ 2,03,445 ಕೋಟಿ ರೂ.ಗಳು. ಇದರ ಜತೆಗೆ ಕೇಂದ್ರ ವಲಯದ ಯೋಜನೆಗಳು(ಸಿಎಸ್‌ಎಸ್), ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನ ಇವುಗಳೆಲ್ಲವೂ ಸೇರಿದಂತೆ ಕೇಂದ್ರದಿಂದ 3 ಲಕ್ಷ ಕೊಟಿ ರೂ.ಅನುದಾನ ಬರಲಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.
ಸುಮಾರು 10 ಸಾವಿರ ಕೋಟಿ ರೂ.ಗಳು ಕಳೆದ ಮೂರು ವರ್ಷಗಳಲ್ಲಿ ಬರದಿರಲು, ರಾಜ್ಯ ಸರಕಾರ ಯೋಜನೆಗಳಿಗೆ ಅನುಷ್ಠಾನ ಪತ್ರ ಕೊಡದೇ ಇರುವುದೇ ಮುಖ್ಯ ಕಾರಣ. ಯುಪಿಎ ಸರಕಾರ ಇದ್ದಾಗಲೂ ನಮ್ಮ ರಾಜ್ಯ ಸರಕಾರ ಶೇ.19ರಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಸುತ್ತಿದ್ದು, ಅವುಗಳಲ್ಲಿ ಶೇ.4.39ರಷ್ಟೇ ರಾಜ್ಯಕ್ಕೆ ಹಂಚಿಕೆ ಆಗಿದೆ. ಇದನ್ನು ಎನ್‌ಡಿಎ ಸರಕಾರ ಶೇ.4.70ಕ್ಕೆ ಏರಿಸಿದೆ ಎಂದು ಅವರು ಹೇಳಿದ್ದಾರೆ.
14ನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಗಳಿಗೆ ಶೇ.32ರಿಂದ ಶೇ.42ರಷ್ಟು ಅನುದಾನ ಹೆಚ್ಚಾಗಿರುವುದರಿಂದ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಅನುದಾನ ಹೆಚ್ಚಿಗೆ ಬರಲಿದೆ. ಇಷ್ಟಾಗಿಯೂ, ಕೇಂದ್ರ ಸರಕಾರದಿಂದ 2017-18ರ ನವೆಂಬರ್‌ವರೆಗೆ ಕೊಟ್ಟಿರುವ 1,35,089 ಕೋಟಿ ರೂ.ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಲೆಕ್ಕವನ್ನು ಕಾಂಗ್ರೆಸ್ ಕೊಟ್ಟಿಲ್ಲ. ಈ ಉತ್ತರದಾಯಿತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







