ಕೇರಳದಲ್ಲಿ ಹೊಸ ವಿವಾದ ಸೃಷ್ಟಿಸಿದ ‘ಸ್ಪೀಕರ್ ಕನ್ನಡಕ’ !

ತಿರುವನಂತಪುರಂ, ಫೆ.3: ಕೇರಳ ವಿಧಾನಸಭಾ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು 50,000 ರೂ. ಬೆಲೆಯ ಕನ್ನಡಕವನ್ನು ಖರೀದಿಸಿದ್ದು ಇದರ ಮೊತ್ತವನ್ನು ಸರಕಾರವು ಮರುಪಾವತಿಸಿರುವ ಹಿನ್ನೆಲೆಯಲ್ಲಿ ವಿವಾದವೊಂದು ತಲೆಯೆತ್ತಿದೆ.
2018-19ರ ಬಜೆಟ್ ಮಂಡಿಸಿದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರಕಾರವು ರಾಜ್ಯದಲ್ಲಿರುವ ವಿತ್ತೀಯ ಬರವನ್ನು ನೀಗಿಸಲು ಕಠಿಣ ವಿತ್ತೀಯ ಶಿಸ್ತನ್ನು ಪಾಲಿಸುವಂತೆ ಸೂಚಿಸಿದ ಮರುದಿನವೇ ಸ್ಪೀಕರ್ ಅವರ ದುಬಾರಿ ಕನ್ನಡಕದ ಕುರಿತ ಮಾಹಿತಿಯು ಬಯಲಾಗಿದೆ.
ಕೊಚ್ಚಿ ನಿವಾಸಿ ನ್ಯಾಯವಾದಿ ಡಿ.ಬಿ ಬಿನು ಅವರು ಮಾಹಿತಿ ಹಕ್ಕಿನಡಿ ಹಾಕಿದ ಅರ್ಜಿಗೆ ಉತ್ತರಿಸಿದ ಶಾಸಕಾಂಗ ಕಾರ್ಯಾಲಯವು, ಸ್ಪೀಕರ್ ಅವರು ಕನ್ನಡಕದ ಪಟ್ಟಿಗೆ 4,900 ರೂ. ಹಾಗೂ ಅದರ ಲೆನ್ಸ್‌ಗೆ 45,000 ರೂ. ಸೇರಿ ಒಟ್ಟಿಗೆ 49,900 ವೆಚ್ಚ ಮಾಡಿದ್ದಾರೆ ಎಂದು ತಿಳಿಸಿದೆ. ಜೊತೆಗೆ 2016ರ ಅಕ್ಟೋಬರ್ 5ರಿಂದ ಈ ವರ್ಷ ಜನವರಿ 19ರ ವರೆಗೆ ಸ್ಪೀಕರ್ ಅವರಿಗೆ 4.25 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಲಾಗಿದೆ ಎಂದು ಕಾರ್ಯಾಲಯ ತಿಳಿಸಿದೆ. ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್, ತಾನು ವೈದ್ಯರ ಸಲಹೆಯ ಮೇರೆಗೆ ಈ ಕನ್ನಡಕವನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಶ್ರೀರಾಮಕೃಷ್ಣನ್ ಅವರು ಸಲ್ಲಿಸಿರುವ ಕೆಲವು ಬಿಲ್‌ಗಳ ಪ್ರತಿಯನ್ನು ನನಗೆ ನೀಡಲಾಗಿಲ್ಲ. ಹಾಗಾಗಿ ವಿಧಾನಸಭಾ ಕಾರ್ಯಾಲಯವು ನೀಡಿರುವ ಅಪೂರ್ಣ ದಾಖಲೆಗಳ ವಿರುದ್ಧ ರಾಜ್ಯ ಮಾಹಿತಿ ಆಯೋಗಯಲ್ಲಿ ದೂರು ಸಲ್ಲಿಸುವುದಾಗಿ ಬಿನು ತಿಳಿಸಿದ್ದಾರೆ. ಈ ಹಿಂದೆ, ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು 28,000 ರೂ. ಬೆಲೆಯ ಕನ್ನಡಕವನ್ನು ಖರೀದಿಸಿದಾಗ ಅದರ ಹಣವನ್ನು ಸರಕಾರದಿಂದ ಮರುಪಾವತಿ ಮಾಡಲಾದ ಕಾರಣಕ್ಕೆ ವಿವಾದಕ್ಕೀಡಾಗಿದ್ದರು. ತನ್ನ ಗಂಡನಿಗಾಗಿ ಖರೀದಿಸಿದ್ದ ಕನ್ನಡಕದ ಬೆಲೆಯನ್ನು ಸರಕಾರದಿಂದ ಪಡೆಯಲು ಶೈಲಜಾ ಅವರು ದಾಖಲೆಗಳನ್ನು ತಿರುಚಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಾಗೃತಿ ಮತ್ತು ಭ್ರಷ್ಟಾಚಾರ ನಿಗ್ರಹದಳ ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದೆ.
ವಿಧಾನಸಭಾ ಸದಸ್ಯರು ಕನ್ನಡಕದ ವೆಚ್ಚವೆಂದು ಹೇಳಿ ದೊಡ್ಡ ಮೊತ್ತದಲ್ಲಿ ಹಣವನ್ನು ಮರುಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ 2004ರಲ್ಲಿ ಆಗಿನ ಸ್ಪೀಕರ್ ವಕ್ಕೊಮ್ ಪುರುಷೋತ್ತಮ್ ಅವರು 5,000 ರೂ. ವರೆಗಿನ ಕನ್ನಡಕದ ಪ್ರೇಮ್‌ಗಳಿಗೆ ಮಾತ್ರ ಸರಕಾರ ಮರುಪಾವತಿ ಮಾಡುವುದಾಗಿ ಮಿತಿ ಹೇರಿದ್ದರು.





