ಪ್ರಧಾನಿ ಮೋದಿ ವಿರುದ್ಧ ಫೆ.4ರಂದು ಕರಾಳ ದಿನಾಚರಣೆ
ಬೆಂಗಳೂರು, ಫೆ.3: ಮಹಾದಾಯಿ ನದಿ ನೀರಿಗಾಗಿ ಹೋರಾಟ ನಡೆಸುತ್ತಿರುವ ಕನ್ನಡ ಪರ, ರೈತ ಸಂಘಟನೆಗಳು ಪ್ರಧಾನಿ ನರೇಂದ್ರಮೋದಿ ವಿರುದ್ಧ ಫೆ.4ರಂದು ಬೆಂಗಳೂರಿನಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರಾಳ ದಿನಾಚರಣೆ ಆಯೋಜಿಸಿವೆ.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ನರೇಂದ್ರ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸುವುದಲ್ಲದೆ, ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಸ್ವಾತಂತ್ರ ಉದ್ಯಾನವನದಲ್ಲಿ ಬೆಳಗ್ಗೆ 11 ಗಂಟೆಗೆ ಸೇರಲಿರುವ ಹೋರಾಟಗಾರರು, ಅಲ್ಲಿಂದ ಬಿಜೆಪಿ ಕಾರ್ಯಕ್ರಮ ನಡೆಯಲಿರುವ ಅರಮನೆ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಕನ್ನಡ ಪರ ಹೋರಾಟಗಾರರಿಗೆ ಮಹಾದಾಯಿ ನದಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರು ಸಹಕಾರ ನೀಡಲಿದ್ದಾರೆ.
ರೈತರ ವಶ: ಪ್ರಧಾನಿ ನರೇಂದ್ರಮೋದಿಗೆ ಮುತ್ತಿಗೆ ಹಾಕಲು ಮಹಾದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ್ ಹೆಬಸೂರು ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಸುಮಾರು 50 ರೈತರನ್ನು ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಬಳಿ ವಶಕ್ಕೆ ತೆಗೆದುಕೊಂಡ ಪೊಲೀಸರು, ಧಾರವಾಡಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕಿನ ಸುಮಾರು 150ಕ್ಕೂ ಹೆಚ್ಚು ರೈತರು ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನತ್ತ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.







