ಮುಖ್ಯ ನ್ಯಾಯಮೂರ್ತಿಗಳ ನೇಮಕ ಮಾಡುವಂತೆ ವಕೀಲರ ಸಂಘ ಆಗ್ರಹ: ಫೆ.05 ರಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು, ಫೆ.3: ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿಯಿರುವ ಮುಖ್ಯ ನ್ಯಾಯಮೂರ್ತಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘದಿಂದ ಫೆ.5 ರಿಂದ ಒಂದು ವಾರಗಳ ಕಾಲ ನಗರದ ಹೈಕೋರ್ಟ್‌ನ ಗೋಲ್ಡನ್ ಜ್ಯೂಬಿಲಿ ಗೇಟ್ ಮುಂಭಾಗದಲ್ಲಿ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ನ್ಯಾಯಾಂಗವು ಕಾರ್ಯಾಂಗದ ಯಾವುದೇ ಹಸ್ತಕ್ಷೇಪವಿಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಅದರಿಂದಾಗಿ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದ ಅವರು, ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸುಪ್ರೀಂಕೋರ್ಟ್ ಕರ್ನಾಟಕ ನ್ಯಾಯಾಲಯಕ್ಕೆ 62 ನ್ಯಾಯಮೂರ್ತಿಗಳಿಗೆ ಅನುಮೋದನೆ ನೀಡಿದೆ. ಆದರೆ, ಪ್ರಸ್ತುತ 24 ನ್ಯಾಯಮೂರ್ತಿಗಳು ರಾಜ್ಯದಲ್ಲಿದ್ದು, ಅದರಲ್ಲಿ 8 ನ್ಯಾಯಮೂರ್ತಿಗಳು ಧಾರವಾಡ ಹಾಗೂ ಗುಲ್ಬರ್ಗಾ ಸರ್ಕ್ಯೂಟ್ ಬೆಂಚ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಿನ್ಸಿಪಲ್ ಬೆಂಚ್‌ನಲ್ಲಿ 16 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ 38 ನ್ಯಾಯಮೂರ್ತಿಗಳ ಅಗತ್ಯವಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಪ್ರಕರಣಗಳು ನಿಗದಿತ ಸಮಯಕ್ಕೆ ನ್ಯಾಯಾಲಯದ ಮುಂದೆ ಬಾರದೇ ಕಕ್ಷಿದಾರರಿಗೆ ತುಂಬಾ ತೊಂದರೆಯಾ ಗುತ್ತಿದೆ. ರಾಜ್ಯದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವಿಳಂಬದಿಂದಾಗಿ ಇದುವರೆಗೂ ಮೂರು ಲಕ್ಷ ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಕೂಡಲೇ ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಉಪವಾಸದ ನಂತರ ರಾಜ್ಯಾದ್ಯಂತ ಒಂದು ದಿನದ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಲಾಗುತ್ತದೆ. ಅನಂತರ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಕೊಲಿಜಿಯಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ಆದರೂ, ನಮ್ಮ ಬೇಡಿಕೆ ಈಡೇರದಿದ್ದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸದರು, ಕೇಂದ್ರ ಮಂತ್ರಿಗಳು ಹಾಗೂ ಹಿರಿಯ ವಕೀಲರನ್ನೊಳಗೊಂಡ ತಂಡವು ಪ್ರಧಾನಮಂತ್ರಿ, ಕಾನೂನು ಸಚಿವರು ಹಾಗೂ ಅಟಾರ್ನಿ ಜನರಲ್‌ರನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.







