ಅಜೆಕಾರು: ಡಾ. ಮಾಲತಿ ಪೈಗೆ ‘ಭಾರತ ಗೌರವ’ ಪ್ರಶಸ್ತಿ

ಹೆಬ್ರಿ, ಫೆ.3: ಕಾರ್ಕಳ ತಾಲೂಕಿನ ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಡಾ. ಮಾಲತಿ ಪೈ ಎಚ್. ಇವರಿಗೆ ಕಲಾ ಸಂಕುಲ ಸಂಸ್ಥೆ ರಾಯಚೂರು ವತಿಯಿಂದ ನೀಡುವ ರಾಷ್ಟ್ರಮಟ್ಟದ ‘ಭಾರತ ಗೌರವ’ ಪ್ರಶಸ್ತಿ ಯನ್ನು ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಇದೇ ಸಮಾರಂಭದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಾಹಿತಿ, ಕವಿ ದೊಡ್ಡರಂಗೇಗೌಡರನ್ನು ಅಭಿನಂದಿಸಲಾಯಿತು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪಡೆದಿರುವ ಯೋಗ ಮತ್ತು ರೇಖಿ ವಿಜ್ಞಾನ ದಲ್ಲಿ ಅಣ್ಣಾಮಲೈ ವಿವಿಯಿಂದ ಎಂಎಸ್‌ಸಿ ಪದವಿ ಪಡೆದಿರುವ ಮಾಲತಿ ಪೈ, ನಿಧಾನ ಕಲಿಕೆಯ ಮಕ್ಕಳ ಮೇಲೆ ಸಂಶೋಧನೆಯನ್ನು ಹಾಗೂ ವಿಕಲಚೇತನ ಮಕ್ಕಳ ಮೇಲೆ ಯೋಗ, ಪ್ರಾಣಾಯಾಮ ಮತ್ತು ಮುದ್ರೆಗಳ ಪ್ರಭಾವವನ್ನು ಸಾಮರ್ಥ್ಯಾನುಸಾರ ಸಂಶೋಧನೆ ಮಾಡಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಡಾ.ಮಾಲತಿ ಪೈ ಅವರು ಪಡುಕುಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿ ಸರಕಾರಿ ಶಾಲೆ ಹಾಗೂ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅಜೆಕಾರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದಾರೆ.
ಸಮಾರಂಭದಲ್ಲಿ ರಾಯಚೂರು ಸಂಸದ ಬಿ.ವಿ.ನಾಯಕ, ಕವಿ ದೊಡ್ಡರಂಗೇ ಗೌಡರು ಉಪಸ್ಥಿತರಿದ್ದರು.







