ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ: ಮುದ್ರಣಾಲಯದಲ್ಲಿ 1000 ಉತ್ತರ ಪತ್ರಿಕೆ ಪತ್ತೆ !

ಜೌನ್‌ಪುರ, ಫೆ. 3: ಉತ್ತರಪ್ರದೇಶದಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಯ 1 ಸಾವಿರ ನಕಲಿ ಉತ್ತರ ಪತ್ರಿಕೆಯನ್ನು ವಾರಣಾಸಿಯಿಂದ 60 ಕಿ.ಮೀ. ದೂರದಲ್ಲಿರುವ ಜೌನ್‌ಪುರದ ಜೋಗಿಪುರ ಪ್ರದೇಶದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರಪ್ರದೇಶ ಬೋರ್ಡ್‌ನ ಮಾದರಿ ಹಾಗೂ ಸಂಕೇತ ಹೊಂದಿರುವ ಖಾಲಿ ಉತ್ತರ ಪತ್ರಿಕೆಯನ್ನು ಇಲ್ಲಿನ ಪ್ರೆಸ್ ಒಂದರಲ್ಲಿ ಅಕ್ರಮವಾಗಿ ಮುದ್ರಿಸಲಾಗುತ್ತಿತ್ತು. ಬೋರ್ಡ್‌ನ ಪ್ರೌಢಶಾಲೆ ಹಾಗೂ ಇಂಟರ್‌ಮೀಡಿಯಟ್ ಪರೀಕ್ಷೆ ಫೆಬ್ರವರಿ 6ರಂದು ನಡೆಯಲಿದೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕ್ರೈಮ್ ಬ್ರಾಂಚ್ ಇನ್ಸ್‌ಪೆಕ್ಟರ್ ವಿಶ್ವನಾಥ್ ತಿವಾರಿ ತಂಡದೊಂದಿಗೆ ದಾಳಿ ನಡೆಸಿ 1 ಸಾವಿರ ಖಾಲಿ ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ಮುದ್ರಣಾಲಯದ ಮಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
20 ಸಾವಿರ ರೂ.ಗೆ ಬಾದಲ್‌ಪುರದ ಮಾ ಶಾರದಾ ಇಂಟರ್ ಕಾಲೇಜಿನಿಂದ 4 ಸಾವಿರ ನಕಲಿ ಉತ್ತರಪತ್ರಿಕೆ ಮುದ್ರಿಸಲು ಆದೇಶ ಸ್ವೀಕರಿಸಿದ್ದೆ ಎಂದು ವಿಚಾರಣೆ ವೇಳೆ ಮೌರ್ಯ ಹೇಳಿದ್ದಾರೆ.
ಉತ್ತರ ಹಾಳೆಗಳನ್ನು ಮುದ್ರಿಸಲು ಆದೇಶ ನೀಡಿದ ವ್ಯಕ್ತಿಯ ಬಗ್ಗೆ ಹಾಗೂ ಈ ಹಾಳೆಗಳನ್ನು ಪರೀಕ್ಷೆಯ ಸಂದರ್ಭ ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





