ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಬೆಂಕಿ: 30ಕ್ಕೂ ಅಧಿಕ ಅಂಗಡಿಗಳು ಭಸ್ಮ

ಜಿಂದ್, ಫೆ. 3: ಶ್ರೀ ಮೀನಾಕ್ಷಿ ಸುಂದರೇಶ್ವರರ್ ದೇವಾಲಯದ ಬದಿಯ ಪೂರ್ವ ಗೋಪುರದಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿದ ಪರಿಣಾಮ 30ಕ್ಕೂ ಅಧಿಕ ಅಂಗಡಿಗಳು ಧ್ವಂಸವಾಗಿವೆ. ಬೆಂಕಿ ಅನಾಹುತಕ್ಕೆ ಕಾರಣ ಇದುವರೆಗೆ ಗೊತ್ತಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಕಿ ನಂದಿಸಲು ಐದು ಅಗ್ನಿ ಶಾಮಕ ದಳಗಳು ಕನಿಷ್ಠ 30 ನಿಮಿಷಗಳ ಕಾಲ ಹರಸಾಹಸ ಪಟ್ಟಿತು ಎಂದು ಪ್ರತ್ಯಕ್ಷದರ್ಶಿ ಕರುಮುತ್ತು ಟಿ. ಕಣ್ಣನ್ ತಿಳಿಸಿದ್ದಾರೆ. ಸ್ವಾಮಿ ಸನ್ನಿಧಿ ಪ್ರದೇಶದಲ್ಲಿರುವ ಅಂಗಡಿಗಳನ್ನು ರಾತ್ರಿ 10.30ಕ್ಕೆ ಮುಚ್ಚಿ ತೆರಳಿದ ಬಳಿಕ ಈ ಅಗ್ನಿ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೇವಾಲಯದ ವಸ್ತುಸಂಗ್ರಹಾಲಯದ ಬದಿಯಿಂದಲೂ ಬೆಂಕಿಯ ಕೆನ್ನಾಲಗೆ ಚಾಚುತ್ತಿದ್ದುದನ್ನು ನಾವು ನೋಡಿದ್ದೆವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಅಂಗಡಿಯೊಂದರಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಈ ಬೆಂಕಿಗೆ ಕೆಲವೇ ಸೆಕೆಂಡುಗಳಲ್ಲಿ ಸುಮಾರು 30ರಿಂದ 40 ಅಂಗಡಿಗಳು ಭಸ್ಮವಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





