ರೈತರ ಆದಾಯ ಹೆಚ್ಚಳ ಮಾಡದೆ, ರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ ಮಾಡಿದ್ದಾರೆ: ಎಚ್.ವಿಶ್ವನಾಥ್

ಮೈಸೂರು,ಫೆ.3: ಬೆಲೆ ಏರಿದಂತೆ ವೇತನ ಹೆಚ್ಚಾಗುತ್ತೆ ಅಂತಾರೆ. ಅದರಂತೆ ರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ ಮಾಡಿದ್ದಾರೆ. ಹಾಗಿದ್ದರೆ ರೈತರ ಆದಾಯ ಹೆಚ್ಚಳ ಮಾಡುವವರು ಯಾರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಸರ್ಕಾರದ ಬಜೆಟ್ ಕಟ್ಟಾ ಮಿಠಾಯಿ ಬಜೆಟ್. ಜನಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಆದರೆ ಅವರು ಯಾಕೆ ಹಿಂದಿನ ಬಜೆಟ್‍ನ ಅಂಕಿ ಅಂಶಗಳನ್ನು ಹಂಚಿಕೊಳ್ಳಲಿಲ್ಲ. ನೀವು ಒಬ್ಬರೆ ತೆಗೆದುಕೊಂಡ ನೋಟು ಅಮಾನೀಕರಣದ ಬಗ್ಗೆ ಯಾಕೆ ಮಾತನಾಡಲಿಲ್ಲ. ನಿಮ್ಮ 2018ರ ಬಜೆಟ್ ಒಂದು ಮನ್ ಕಿ ಬಾತ್ ಅಷ್ಟೇ. ಯಾರು ಕೊಟ್ಟ ಭರವಸೆ ಈಡೇರಿಸುತ್ತಾರೆ ಅವರೇ ನಿಜವಾದ ದೇಶಭಕ್ತ ಎಂದು ಹೇಳಿದರು.
ಸ್ವಚ್ಛಭಾರತ, ಮುದ್ರಾ ಯೋಜನೆ ಕ್ರಾಂತಿಕಾರಿ ಅಲ್ಲ. ಅದೆಲ್ಲ ಹಳೆ ಯೋಜನೆಗಳಿಗೆ ಹೊಸ ನಾಮಧೇಯ ಅಷ್ಟೇ. 2018ರ ಬಜೆಟ್ ಸ್ವಲ್ಪ ಸಿಹಿ, ಜಾಸ್ತಿ ಕಹಿ ಆಗಿದೆ. ಇದು ದೇಶದ ಬಜೆಟ್. ಗಣಪತಿ ಹಬ್ಬದಲ್ಲಿ ಲೆಕ್ಕ ಕೊಡೋ ಬಜೆಟ್ ಅಲ್ಲವೆಂದು ವ್ಯಂಗ್ಯವಾಡಿದರು.
ಚಿಕ್ಕಮಾದು ಕುಟಂಬ ಜೆಡಿಎಸ್ ತೊರೆದಿರುವುದು ನೋವು ತಂದಿದೆ: ಚಿಕ್ಕಮಾದು ಕುಟುಂಬ ಜೆಡಿಎಸ್ ತೊರೆದಿರುವುದು ನನಗೆ ನೋವಾಗಿದೆ. ಜೆಡಿಎಸ್ ಅವರಿಗೆ ಎಲ್ಲವನ್ನೂ ನೀಡಿತ್ತು. ಆದರೂ ಆ ಚಿಕ್ಕ ಹುಡುಗನನ್ನು ಯಾರೋ ದಿಕ್ಕು ತಪ್ಪಿಸಿದ್ದಾರೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಬರೋದಕ್ಕೆ ದಿ.ಶಾಸಕ ಚಿಕ್ಕಮಾದು ಅವರೇ ಕಾರಣ. ಕಾಂಗ್ರೆಸ್ ಬಿಟ್ಟ ಸಂದರ್ಭ ಚಿಕ್ಕಮಾದು ನನ್ನ ಮನವೊಲಿಸಿದರು. ನಿಮ್ಮಂತವರು ರಾಜಕೀಯದಲ್ಲಿ ಇರಬೇಕು ಅಂತ ಕೇಳಿಕೊಂಡಿದ್ದರು. ಅವರೇ ಮೊದಲು ನನ್ನನ್ನು ಜೆಡಿಎಸ್‍ಗೆ ಕರೆದರು. ಆದರೆ ಅವರ ಕುಟುಂಬದವರೇ ಜೆಡಿಎಸ್ ತೊರೆದಿದ್ದು ನನಗೆ ನೋವಾಗಿದೆ. ಚಿಕ್ಕಮಾದು ಅವರ ಮಗ ಇನ್ನೂ ಚಿಕ್ಕ ಹುಡುಗನಾಗಿದ್ದು, ಯಾರೋ ದಿಕ್ಕು ತಪ್ಪಿಸಿದ್ದಾರೆ ಎಂದರು.
ನಾನು ಮತ್ತು ಸಾ.ರಾ. ಮಹೇಶ್ ಅನೀಲ್ ಚಿಕ್ಕಮಾದು ಅವರೊಂದಿಗೆ ಮಾತನಾಡಿದ್ದೆವು. ಆದರೆ ಒಂದೇ ವಾರಕ್ಕೆ ಅವರು ಸಿದ್ದರಾಮಯ್ಯ ಕಾಲಿಗೆ ಬಿದ್ದರು. ಜೆಡಿಎಸ್ ಅನ್ನು ದುರ್ಬಲ ಮಾಡಲು ಸಿದ್ದರಾಮಯ್ಯ ಹೀಗೆಲ್ಲ ಮಾಡಿಸುತ್ತಿದ್ದಾರೆ. ಯಾಕಂದರೆ ಸಿದ್ದರಾಮಯ್ಯರೇ ಈಗ ದುರ್ಬಲರಾಗಿದ್ದಾರೆ. ಅವರಿಂದ ಜೆಡಿಎಸ್‍ಅನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯಗೆ ಬಜೆಟ್ ಮಂಡಿಸಲು ಯಾವುದೇ ಹಕ್ಕಿಲ್ಲ, ಆದರೂ ಮಂಡಿಸುತ್ತಾರೆ. ಯಾಕೆಂದರೆ ಅವರಿಗೆ ಯಾವುದೇ ಕಾನೂನು ಗೊತ್ತಿಲ್ಲ. ನನ್ನ ನಂತರ ಜಲಪ್ರಳಯವಾಗಲಿ ಅನ್ನೋ ಮನಃಸ್ಥಿತಿ ಸಿದ್ದರಾಮಯ್ಯನದು. ನನ್ನ ನಂತರ ಯಾರಿಗೂ, ಏನೂ ಇರಬಾರದು ಅನ್ನೋದು ಸಿಎಂ ಮನಃಸ್ಥಿತಿ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರ ಮುಂದೆ ಸಿಎಂ ಬುಡುಬುಡಿಕೆ ಅಲ್ಲಾಡಿಸುತ್ತಿದ್ದಾರೆ. ಮುಸ್ಲಿಂ ಗುರುಗಳನ್ನು ರಾತ್ರೋರಾತ್ರಿ ಭೇಟಿ ಮಾಡುವ ಅಗತ್ಯವೇನಿತ್ತು. ಹಗಲು ಹೊತ್ತು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಲು ಹೆದರಿಕೆಯೇ? ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಇಂದಿರಾ ಕ್ಯಾಂಟೀನ್ ಬಗ್ಗೆ ನಮಗೆ ಗೌರವ ಇದೆ. ಅನ್ನದ ಬಗ್ಗೆ ಗೌರವ ಇದೆ. ಆದರೆ ಕೊನೆ ಮೂರು ತಿಂಗಳಲ್ಲಿ ಅದನ್ನ ಜಾರಿ ಮಾಡಿದಿರಿ. ಇಷ್ಟು ವರ್ಷ ನಿದ್ದೆ ಮಾಡ್ತಿದ್ರಾ? ಇಷ್ಟು ದಿನ ಬಡವರು ಇರಲಿಲ್ವಾ? ಯಾವ ಆಧಾರದ ಮೇಲೆ ಈ ಯೋಜನೆಗಳನ್ನ ಜಾರಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಪ್ರೊ.ಎಚ್.ಗೋವಿಂದಯ್ಯ, ಅಶೋಕಪುರಂ ರೇವಣ್ಣ ಸೇರಿದಂತೆ ಹಲವರು ಇದ್ದರು.







