ದೇರಳಕಟ್ಟೆ: ಕಣಚೂರು ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ

ಕೊಣಾಜೆ, ಫೆ. 3: ಕ್ರೀಡೆಯಲ್ಲಿ ಸ್ಪರ್ಧಿಸುವುದರ ಜೊತೆಗೆ ಕ್ರೀಡಾಸ್ಪೂರ್ತಿ ಮೆರೆಯುವುದು ಅತಿ ಮುಖ್ಯ. ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಎಲ್ಲಕ್ಕಿಂತ ನಾವು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಕಠಿಣ ಪರಿಶ್ರಮವಿದ್ದರೆ ಮಾತ್ರ ನಾವು ಉತ್ತಮ ಪ್ರದರ್ಶನ ನೀಡುತ್ತಾ ಎಲ್ಲರಿಂದಲೂ ಗುರುತಿಸಲು ಸಾಧ್ಯ ಎಂದು ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಕೆ. ಮೋನು ಹೇಳಿದರು.
ದೇರಳಕಟ್ಟೆಯ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಕಣಚೂರು ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಕಣಚೂರು ಇನ್ಞಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸಸ್ ವಿಭಾಗದ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡೋತ್ಸವ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಲ್ಲಿ ಸನ್ನಡತೆ ಹಾಗೂ ಇತರ ಸಹಪಾಠಿ ಸ್ಪರ್ಧಿಗಳನ್ನು ಮೇಲಕ್ಕೆತ್ತುವ ಕ್ರೀಡಾ ಮನೋಭಾವ ಬೇಕು. ಹೊರತು ಇತರ ಕ್ರೀಡಾಳುಗಳ ಮನಸ್ಸು ನೋಯಿಸುವುದು ಸಲ್ಲದು ಮತ್ತು ಅನ್ಯೋನ್ಯತೆಯಿಂದ ಮುನ್ನಡೆಯಬೇಕು. ಕ್ರೀಡೆಯಲ್ಲಿ ಶ್ರದ್ಧೆ ಹಾಗೂ ಉತ್ಸುಕತೆ ಬೇಕು. ಈ ದಿನ ಬದುಕಿನಲ್ಲಿ ಮರೆಯಲಾರದ ದಿನವಾಗಬೇಕು. ಈ ವಯಸ್ಸು ದಾಟಿ ಹೋದಾಗ ಮುಂದೆ ಮತ್ತೊಮ್ಮೆ ಇಂತಹ ಅವಕಾಶ ದೊರಕದು ಎಂಬ ಭಾವನೆ ಸದಾ ನಮ್ಮಲ್ಲಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಟ್ರಸ್ಟಿ ಝೊಹ್‌ರಾ ಮೋನು ಹಾಗೂ ಸಹದಾ ರಹಮಾನ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ.ಎಚ್.ಎಸ್. ವಿರೂಪಾಕ್ಷ, ಕಣಚೂರು ಇರ್ನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಸೈನ್ಸಸ್ ಪ್ರಾಂಶುಪಾಲ ವಿವಿಯನ್ ಡಿಸೋಜ ಹಾಗೂ ಡಾ. ಮಹಮ್ಮದ್ ಸುಹೈಲ್ ಉಪಸ್ಥಿತರಿದ್ದರು.
ಕಣಚೂರು ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಪ್ರೊ. ರೆನಿಲ್ಡಾ ಶಾಂತಿ ಲೋಬೊ ಸ್ವಾಗತಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.







