ಕುಂದಾಪುರದಲ್ಲಿ ತಾನು ಸ್ಪರ್ಧಾಕಾಂಕ್ಷಿ: ರಾಕೇಶ್ ಮಲ್ಲಿ

ಉಡುಪಿ, ಫೆ.3: ರಾಜ್ಯ ಇಂಟಕ್‌ನ ಅಧ್ಯಕ್ಷನಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಾಕಾಂಕ್ಷಿ ಯಾಗಿದ್ದು, ಪಕ್ಷ ಅವಕಾಶ ನೀಡಿದರೆ 20 ವರ್ಷಗಳ ಬಳಿಕ ಕುಂದಾಪುರದಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲಾ ಪ್ರಯತ್ನ ನಡೆಸುವುದಾಗಿ ರಾಕೇಶ್ ಮಲ್ಲಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯರು ತನಗೆ ಬೆಂಬಲ ನೀಡುತಿದ್ದಾರೆ ಎಂದರು. ಪಕ್ಷದ ಹಿರಿಯರ ಸೂಚನೆಯಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದುಡಿಯುತಿದ್ದು, ಇದಕ್ಕಾಗಿ ಮೂಲತ: ದಕ್ಷಿಣ ಕನ್ನಡದವನಾದ ನಾನು ಕುಂದಾಪುರದಲ್ಲೇ ಮನೆ ಮಾಡಿದ್ದು, ಇಲ್ಲೇ ವಾಸ್ತವ್ಯವನ್ನೂ ಮಾಡುತಿದ್ದೇನೆ ಎಂದರು.
ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಇಲ್ಲಿನ ಯುವಕರು ಹಾಗೂ ಹಿರಿಯರ ಸಲಹೆ ಹಾಗೂ ಮಾರ್ಗದರ್ಶನ ಪಡೆಯುತಿದ್ದೇನೆ. ಈ ಭಾಗದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಹಾಗೂ ಕ್ರೀಡಾಕ್ಷೇತ್ರಗಳ ಅಭಿವೃದ್ಧಿಗೆ ಎಲ್ಲರೊಂದಿಗೆ ಚರ್ಚಿಸಿ ನೀಲನಕಾಶೆಯನ್ನು ಸಿದ್ಧಪಡಿಸಲಿದ್ದೇನೆ ಎಂದರು.
ಕಳೆದ ನಾಲ್ಕು ಅವಧಿಯಲ್ಲಿ ಸತತವಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸತತ ಎರಡನೇ ಬಾರಿಗೆ ತಮ್ಮ ಶಾಸಕತ್ವದ ಅವಧಿ ಮುಗಿಯುವ ಮೊದಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವುದನ್ನು ಅವರು ಟೀಕಿಸಿದರು. ಕ್ಷೇತ್ರದ ಮತದಾರರ ಅಭಿಪ್ರಾಯವನ್ನೂ ಪಡೆಯದೇ, ತನ್ನ ಸ್ವಾರ್ಥಕ್ಕಾಗಿ ಏಕಾಏಕಿ ರಾಜಿನಾಮೆ ನೀಡಿರುವುದು, ಕ್ಷೇತ್ರದ ಕುರಿತು ಅವರ ಕಾಳಜಿಗೆ ದ್ಯೋತಕ ಎಂದರು.
2013ರಲ್ಲಿ ಬಿಜೆಪಿಯಿಂದ ತನಗೆ ದ್ರೋಹವಾಗಿದೆ. ಇನ್ನು ಯಾವುದೇ ಕಾರಣಕ್ಕೂ ಆ ಪಕ್ಷಕ್ಕೆ ಮರಳಲಾರೆ ಎಂದು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಹಾಲಾಡಿ, ತನಗೆ ಮತ ನೀಡಿದ ಜಾತ್ಯತೀತ ಮನೋಭಾವದ ಮತದಾರರ ಬೆಂಬಲವನ್ನು ಧಿಕ್ಕರಿಸಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಟೀಕಿಸಿದರು.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ, ಕ್ಷೇತ್ರಕ್ಕೆ ಅವರು ಮತದಾರರರು ನೆನಪಿಟ್ಟುಕೊಳ್ಳುವ ಯಾವುದೇ ಕೊಡುಗೆ ನೀಡಲು ವಿಫಲರಾಗಿದ್ದಾರೆ. ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಶಾಸಕರಾಗಿ ಅವರು ಸಂಪೂರ್ಣ ನಿಷ್ಕೃಿಯರಾಗಿದ್ದರು ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ.ಕುಂದರ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ರೋಶನಿ ಒಲಿವೆರಾ, ದಿನೇಶ್ ಕೋಟ್ಯಾನ್ ಹಾಗೂ ನಾಗೇಂದ್ರ ಉಪಸ್ಥಿತರಿದ್ದರು.







