ವಿಶ್ವವಿದ್ಯಾನಿಲಯದ ಕಚೇರಿಗೆ ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ: ಕಾರಣ ಏನು ಗೊತ್ತಾ ?

ಶ್ರೀಗನರ, ಫೆ. 3: 2007ರಲ್ಲಿ ‘ಅಶ್ಲೀಲತೆ ವಿವಾದ’ದ ಕೇಂದ್ರ ಬಿಂದುವಾಗಿದ್ದ ಮಹಾರಾಜ ಸಯ್ಯಜಿರಾವ್ ವಿಶ್ವವಿದ್ಯಾನಿಲಯದ ಫೈನ್‌ಆರ್ಟ್ಸ್‌ನ ಮಾಜಿ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ಪ್ರಮಾಣಪತ್ರ ನೀಡದಿರುವುದಕ್ಕೆ ಆಕ್ರೋಶಿತನಾಗಿ ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದ ಫೈನ್ ಆರ್ಟ್ಸ್ ವಿಭಾಗದಲ್ಲಿ 11 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದ ಚಂದ್ರ ಮೋಹನ್‌ನನ್ನು ಬಂಧಿಸಲಾಗಿದೆ ಎಂದು ಸಯ್ಯಾಜಿಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್ ವೋರಾ ತಿಳಿಸಿದ್ದಾರೆ.
ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದ ನಿರ್ಧಾರ ತೆಗೆದುಕೊಳ್ಳುವ ಅತ್ಯುಚ್ಚ ಘಟಕ ಸಿಂಡಿಕೇಟ್‌ನ ಸದಸ್ಯರಾಗಿರುವ ಜಿಗರ್ ಜಾಮ್‌ದಾರ್ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಬೆಂಕಿ ಹರಡುತ್ತಿರುವ ಸಂದರ್ಭ ಫೈಲ್‌ಗಳನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸಿದ ಸಂದರ್ಭ ಅವರಿಗೆ ಸುಟ್ಟ ಗಾಯಗಳಾಗಿವೆ. ತನಗೆ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ನೀಡದೇ ಇರುವುದಕ್ಕೆ ಕಾರಣವೇನು ಎಂಬ ಬಗ್ಗೆ ಪ್ರಶ್ನಿಸಲು ಉಪ ಕುಲಪತಿಯನ್ನು ಭೇಟಿಯಾಗಲು ತೆಲಂಗಾಣ ಜಿಲ್ಲೆಯ ವಾರಂಗಲ್‌ನ ಚಂದ್ರ ಮೋಹನ್ ಆಗ್ರಹಿಸಿದ್ದ. ಮೋಹನ್ 2007 ಮೇಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದ. ಉಪ ಕುಲಪತಿಗಳನ್ನು ಭೇಟಿಯಾಗುವ ಕುರಿತಂತೆ ಅವರ ಪಿ.ಎ. ಜೈಕುಮಾರ್ ನಾಯರ್‌ರೊಂದಿಗೆಗೆ ವಾಗ್ವಾದ ನಡೆದ ಬಳಿಕ ಚಂದ್ರ ಕುಮಾರ್ ಪೆಟ್ರೋಲ್ ಬಾಟಲಿಯೊಂದಿಗೆ ಆಗಮಿಸಿ ಕಚೇರಿಗೆ ಸುರಿದು ಬೆಂಕಿ ಹಚ್ಚಿದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಉಪ ಕುಲಪತಿಯವರ ಕಚೇರಿ ಸೇರಿದಂತೆ ಎರಡು ಕೊಠಡಿಗಳು ಬೆಂಕಿಗಾಹುತಿಯಾಗಿವೆ. ಕೆಲವು ದಾಖಲೆ ಹಾಗೂ ಫೈಲ್‌ಗಳು ಸುಟ್ಟು ಹೋಗಿವೆ. ಈ ಘಟನೆ ನಡೆಯುತ್ತಿರುವಾಗ ಉಪ ಕುಲಪತಿ ಕಚೇರಿಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದ್ಜಾರೆ.







