ಲಂಡನ್: ಮಸೀದಿಗೆ ಹೋಗುವವರ ಮೇಲೆ ವ್ಯಾನ್ ಹರಿಸಿದವನಿಗೆ ಜೀವಾವಧಿ ಶಿಕ್ಷೆ

ಲಂಡನ್ (ಚೀನಾ), ಫೆ. 3: ಕಳೆದ ವರ್ಷದ ಜೂನ್‌ನಲ್ಲಿ ಲಂಡನ್‌ನ ಮಸೀದಿಯೊಂದರ ಹೊರಗೆ ಮುಸ್ಲಿಮರ ಗುಂಪೊಂದರ ಮೇಲೆ ವ್ಯಾನ್ ಚಲಾಯಿಸಿ ಓರ್ವ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಬ್ರಿಟಿಶ್ ಪ್ರಜೆಯೊಬ್ಬನಿಗೆ ನ್ಯಾಯಾಲಯವೊಂದು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆತ ಕನಿಷ್ಠ 43 ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗಿದೆ.
48 ವರ್ಷದ ಅಪರಾಧಿ ನಡೆಸಿದ ವ್ಯಾನ್ ದಾಳಿಯಲ್ಲಿ 51 ವರ್ಷದ ಮಕ್ರಮ್ ಅಲಿ ಮೃತಪಟ್ಟಿದ್ದರು ಹಾಗೂ 12 ಮಂದಿ ಗಾಯಗೊಂಡಿದ್ದರು.
ಗುರುವಾರ ಆರೋಪಿಯ ವಿರುದ್ಧದ ಕೊಲೆ ಹಾಗೂ ಕೊಲೆಯತ್ನ ಆರೋಪ ಸಾಬೀತಾಗಿತ್ತು. ನ್ಯಾಯಾಧೀಶರು ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಈ ನಿರ್ಧಾರಕ್ಕೆ ಬಂದರು.
‘‘ಇದೊಂದು ಭಯೋತ್ಪಾದಕ ದಾಳಿಯಾಗಿತ್ತು. ನೀನು ಜನರನ್ನು ಕೊಲ್ಲಲು ಬಯಸಿದ್ದಿ’’ ಎಂದು ಆಗ್ನೇಯ ಲಂಡನ್‌ನ ವೂಲ್‌ವಿಚ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶೆ ಬಾಬಿ ಚೀಮಾ-ಗ್ರಬ್ ಹೇಳಿದರು.
‘‘ನೀನು ಸುದೀರ್ಘ ಅವಧಿಯಲ್ಲಿ ಮನ ಪರಿವರ್ತನೆಗೆ ಒಳಗಾಗದೆ ಇರಬಹುದು. ಆದರೆ, ಎಲ್ಲ ಮುಸ್ಲಿಮರನ್ನು ದ್ವೇಷಿಸುವ ಅವೈಚಾರಿಕ ಮಟ್ಟಕ್ಕೆ ಇಳಿದಿರುವುದರಿಂದ ನೀನು ಸಾರ್ವಜನಿಕರಿಗೆ ಅಪಾಯಕಾರಿಯಾಗಿರುವೆ’’ ಎಂದು ನ್ಯಾಯಾಧೀಶೆ ಹೇಳಿದ್ದಾರೆ.







