ಸಿರಿಯದಿಂದ ಜನರ ಮೇಲೆ ಮತ್ತೆ ರಾಸಾಯನಿಕ ಅಸ್ತ್ರಗಳ ದಾಳಿ?
ಸೇನಾ ಕಾರ್ಯಾಚರಣೆ ಸಾಧ್ಯತೆ ಜೀವಂತ: ಅಮೆರಿಕ

ಜಿದ್ದಾ, ಫೆ. 3: ಸಿರಿಯದಲ್ಲಿ ರಾಸಾಯನಿಕ ಅಸ್ತ್ರಗಳ ದಾಳಿಯನ್ನು ನಿಲ್ಲಿಸಲು ಸೇನಾ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವಂತವಾಗಿಟ್ಟಿದ್ದಾರೆ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸಿರಿಯ ಸರಕಾರದ ಪಡೆಗಳು ಜನರ ಮೇಲೆ ಹೊಸದಾಗಿ ಸಾರಿನ್ ಮತ್ತು ಕ್ಲೋರಿನ್ ರಾಸಾಯನಿಕಗಳನ್ನು ಪ್ರಯೋಗಿಸಿವೆ ಎಂಬ ದೃಢಪಡದ ವರದಿಗಳ ಹಿನ್ನೆಲೆಯಲ್ಲಿ, ಸಿರಿಯ ಅಧ್ಯಕ್ಷ ಬಶರ್ ಅಸ್ಸಾದ್ ಮತ್ತು ರಶ್ಯಕ್ಕೆ ಕಠಿಣ ಸಂದೇಶ ನೀಡಲು ತಾನು ಬಯಸಿರುವುದಾಗಿ ವಾಶಿಂಗ್ಟನ್ ಹೇಳಿದೆ.
ಹೊಸ ರಾಸಾಯನಿಕ ದಾಳಿಗಳು ಬಂಡುಕೋರರ ನಿಯಂತ್ರಣದ ಡೌಮ ಪಟ್ಟಣದಲ್ಲಿ ಗುರುವಾರ ನಡೆದಿದೆ ಎನ್ನಲಾಗಿದೆ.
ರಾಕೆಟ್ ದಾಳಿಯೊಂದು ನಡೆದ ಬಳಿಕ ಮೂವರು ಉಸಿರಾಟದ ಸಮಸ್ಯೆಗೊಳಗಾದರು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
‘‘ರಶ್ಯದ ಬೆಂಬಲವಿಲ್ಲದಿದ್ದರೆ, ತನ್ನ ಚಟುವಟಿಕೆಗಳನ್ನು ಹಾಗೂ ಅಮಾನುಷ ಕೃತ್ಯಗಳನ್ನು ಮುಂದುವರಿಸುವ ಧೈರ್ಯವನ್ನು ಸಿರಿಯ ಮಾಡುತ್ತಿರಲಿಲ್ಲ’’ ಎಂದು ಸಿರಿಯ ಪ್ರತಿಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ.





