ದಕ್ಷಿಣ ಆಫ್ರಿಕದ ಹಂಗಾಮಿ ನಾಯಕನಾಗಿ ಮರ್ಕರಮ್
ಕೇಪ್‌ಟೌನ್, ಫೆ.3: ಗಾಯಗೊಂಡಿರುವ ಎಫ್‌ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ 23ರ ಹರೆಯದ ಬ್ಯಾಟ್ಸ್‌ಮನ್ ಏಡೆನ್ ಮರ್ಕರಮ್ ಭಾರತ ವಿರುದ್ಧ ಉಳಿದಿರುವ 5 ಏಕದಿನ ಪಂದ್ಯಗಳು ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸಲಿದ್ದಾರೆ.
2017ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಪಂದ್ಯ ಆಡಿರುವ ಮರ್ಕರಮ್ ಈತನಕ ಕೇವಲ 2 ಏಕದಿನ ಪಂದ್ಯ, 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮರ್ಕರಮ್ ನಾಯಕತ್ವದಲ್ಲಿ 2014ರಲ್ಲಿ ದಕ್ಷಿಣ ಆಫ್ರಿಕ ತಂಡ ಅಂಡರ್-19 ವಿಶ್ವಕಪ್‌ನ್ನು ಜಯಿಸಿತ್ತು. ಈ ಹಿನ್ನೆಲೆಯಲ್ಲಿ ಮರ್ಕರಮ್ ಭವಿಷ್ಯದ ನಾಯಕನೆಂದು ಪರಿಗಣಿಸಲ್ಪಟ್ಟಿದ್ದರು.
ಡರ್ಬನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಪ್ಲೆಸಿಸ್ ಕೈಬೆರಳಿಗೆ ಗಾಯವಾಗಿತ್ತು. ಗಾಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದರು.
ಪ್ಲೆಸಿಸ್ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಆದರೆ, 33ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ(79) ದಕ್ಷಿಣ ಆಫ್ರಿಕಕ್ಕೆ ಗೆಲುವು ನಿರಾಕರಿಸಿದರು.





