ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ
ಅರಮನೆ ಮೈದಾನದಲ್ಲಿ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ
ಬೆಂಗಳೂರು,ಫೆ.4: ರಾಜ್ಯದಲ್ಲಿ 90 ದಿನಗಳ ಕಾಲ ನಡೆದ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ರವಿವಾರ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ.
ಅಪರಾಹ್ನ 2 ಗಂಟೆಯಿಂದ ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಲಿದ್ದಾರೆ.
ದೇಶದ ಪ್ರಧಾನಿ ಸ್ವಾಗತಕ್ಕೆ ಅರಮನೆ ಮೈದಾನ ಸಿದ್ದವಾಗಿದೆ. ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಸಾಗರ ಹರಿದು ಬರುತ್ತಿದೆ. ಅರಮನೆ ಮೈದಾನ ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 13,000 ಪೊಲೀಸ್ ಸಿಬ್ಬಂದಿಯನ್ನು ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ. 1200 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಾಹ್ನ 1ಗಂಟೆಗೆ ದಿಲ್ಲಿಯಿಂದ ಹೊರಟು 3.30ರ ವೇಳೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಅಲ್ಲಿಂದ 3.55ಕ್ಕೆ ಅರಮನೆ ಮೈದಾನಕ್ಕೆ ಆಗಮಿಸಿ, ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಸುಮಾರು ಮೂರೂವರೆ ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.