ಕಾಸ್‌ಗಂಜ್ ಘಟನೆ ಕ್ಷುಲ್ಲಕ ಎಂದ ಉತ್ತರ ಪ್ರದೇಶ ಸಚಿವ

ಲಕ್ನೋ, ಫೆ.4: ಕೋಮುಗಲಭೆಯಿಂದ ಪ್ರಕ್ಷುಬ್ಧವಾಗಿದ್ದ ಕಾಸ್‌ಗಂಜ್ ಪಟ್ಟಣ ಇನ್ನೂ ಸಹಜ ಸ್ಥಿತಿಗೆ ಮರಳುತ್ತಿರುವ ಮಧ್ಯೆಯೇ, ಉತ್ತರ ಪ್ರದೇಶದ ಸಚಿವ ಸತ್ಯದೇವ್ ಪಚೌರಿ, ಇದು ಕ್ಷುಲ್ಲಕ ಗಲಭೆ ಎಂದು ಹೇಳುವ ಮೂಲಕ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
"ಇಂಥ ಸಣ್ಣಪುಟ್ಟ ಘಟನೆಗಳು ಎಲ್ಲೆಡೆ, ಯಾವಾಗಲೂ ನಡೆಯುತ್ತಲೇ ಇರುತ್ತವೆ. ಇದಕ್ಕೆ ಹೆಚ್ಚಿನ ಮಹತ್ವದ ನೀಡಬೇಕಾದ ಅಗತ್ಯವಿಲ್ಲ" ಎಂದು ಪ್ರಜಾಪ್ರಭುತ್ವ ದಿನದಂದು ಪಟ್ಟಣದಲ್ಲಿ ನಡೆದ ಕೋಮು ಸಂಘರ್ಷದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಖಾದಿ, ಗ್ರಾಮೋದ್ಯೋಗ ಮತ್ತು ಜವಳಿ ಖಾತೆಯ ಸಚಿವರಾಗಿರುವ ಪಚೌರಿ, ಈ ಘಟನೆಗೆ ಜಿಲ್ಲಾಡಳಿತದ ಮೇಲೆ ಗೂಬೆ ಕೂರಿಸಿದ್ದಾರೆ. "ಸಮಾಜಘಾತುಕರು ಪರಿಸ್ಥಿತಿ ಹದಗೆಡಿಸುವ ಮುನ್ನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು" ಎಂದು ಸಚಿವರು ಪ್ರತಿಕ್ರಿಯಿಸಿದರು.
ಕಾಸ್‌ಗಂಜ್‌ನಲ್ಲಿ ವಿಎಚ್‌ಪಿ ಮತ್ತು ಎಬಿವಿಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂಬ ಆರೋಪದಲ್ಲಿ ಸಂಭವಿದ ಸಂಘರ್ಷದಲ್ಲಿ ಚಂದನ್‌ಗುಪ್ತಾ ಬಲಿಯಾದ ಬಳಿಕ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.







