ಮಂಜುವಾರಿಯರ್ ಬದಲಿಗೆ ನಯನ್ಸ್

ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಮಂಜುವಾರಿಯರ್ ‘ಅಮಿ’ ಬಿಡುಗಡೆಗೆ ರೆಡಿಯಾಗುತ್ತಿರುವಂತೆಯೇ, ಆಕೆಯ ತಮಿಳು ಅಭಿಮಾನಿಗಳಿಗೆ ನಿರಾಶೆಯ ಸುದ್ದಿಯೊಂದು ಕಾದಿದೆ. ಮಂಜುವಾರಿಯರ್ ತಮಿಳು ಚಿತ್ರವೊಂದರಲ್ಲಿ ನಟಿಸಲಿರುವ ಬಗ್ಗೆ ಕಳೆದ ವರ್ಷದಿಂದಲೇ ಬಹಳಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಮಂಜುವಾರಿಯರ್ ನಟಿಸಬೇಕಿದ್ದ ತಮಿಳು ಚಿತ್ರದ ನಿರ್ದೇಶಕ ಅರಿವಳಗನ್, ಈಗ ನಯನತಾರಾ ಅಭಿನಯದ ಚಿತ್ರವೊಂದನ್ನು ನಿರ್ಮಿಸುವುದಾಗಿ ಘೋಷಿಸಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ತಮಿಳು ಚಿತ್ರರಂಗದ ಕೆಲವು ಮೂಲಗಳ ಪ್ರಕಾರ ಅರಿವಳಗನ್ ತನ್ನ ಚಿತ್ರಕ್ಕೆ ಮಂಜುವಾರಿಯರ್‌ರನ್ನು ಕೈಬಿಟ್ಟು, ಅವರ ಜಾಗಕ್ಕೆ ನಯನತಾರಾ ಅವರನ್ನು ತಂದಿದ್ದಾರೆ ಎನ್ನಲಾಗಿದೆ. ಆದರೆ ‘ಅರಿವಳಗನ್’ ಇದೀಗ ಈ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಮಂಜುವಾರಿಯರ್ ನಟಿಸಬೇಕಿದ್ದ ಚಿತ್ರವು ಫ್ಯಾಮಿಲಿ ಥ್ರಿಲ್ಲರ್ ಚಿತ್ರವಾಗಿದ್ದರೆ, ನಯನ್ಸ್ ಅಭಿನಯಿಸಲಿರುವ ಚಿತ್ರವು ಸೈಕಾಲಜಿಕಲ್ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿದೆಯೆಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಮಂಜುವಾರಿಯರ್ ನಟಿಸಲಿರುವ ಚಿತ್ರದ ಕೆಲಸವನ್ನು ಯಾವಾಗ ಆರಂಭಿಸುವೆನೆಂಬ ಬಗ್ಗೆ ಯಾವುದೇ ವಿವರ ನೀಡುವ ಗೋಜಿಗೆ ಅವರು ಹೋಗಿಲ್ಲ. ತಮಿಳಿನ ಸೂಪರ್‌ಹಿಟ್ ನಿರ್ದೇಶಕ ಶಂಕರ್, ಅವರ ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ದುಡಿದಿದ್ದ ಅರಿವಳಗನ್, ಈಗ ಮಲಯಾಳಂನ ಸೂಪರ್‌ಹಿಟ್ ಚಿತ್ರ ‘ಮೆಮೊರೀಸ್’ನ ತಮಿಳು ರಿಮೇಕ್ ‘ಕುಟ್ರಂ’ನ ಕೆಲಸ ಪೂರ್ಣಗೊಳಿಸಿದ್ದು, ಚಿತ್ರ ಫೆಬ್ರವರಿ 23ರಂದು ತೆರೆಕಾಣಲಿದೆ.





