ತುಮಕೂರು: ಫೆ.06 ರಿಂದ ಬಿಸಿಯೂಟ ನೌಕರರ ಅನಿರ್ಧಿಷ್ಟಾವಧಿ ಧರಣಿ

ತುಮಕೂರು,ಫೆ.04: ಬಿಸಿಯೂಟ ನೌಕರರಿಗೆ ನೀಡಿದ ಭರವಸೆಯನ್ನು ಈಡೇರಿಸದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಫೆ.06 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಿಸಿಯೂಟ ನೌಕರರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಸಿಯೂಟ ನೌಕರರಾದ ವನಜಾಕ್ಷಿ, ಸುಶೀಲ, ಕೆ.ಪಿ.ರಂಗಮ್ಮ, ಶಾಂತಮ್ಮ, ಉಮಾದೇವಿ, ಕಮಲ, ಸಿದ್ದಗಂಗಮ್ಮ, ಜಗದಾಂಬಾ, ಲಕ್ಷ್ಮಿದೇವಮ್ಮ , ಸಚಿವರಾದ ತನ್ವಿರ್ ಸೇಠ್ ಪ್ರತಿಭಟನಾನಿರತ ಬಿಸಿಯೂಟ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರದ ಮುಂದಿರುವ ನಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಬ್ರವರಿ 06 ರಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.
ರಾಜ್ಯದಲ್ಲಿ 2003ರಲ್ಲಿ ಅಧಿಕಾರದಲ್ಲಿದ್ದ ಅಂದಿನ ರಾಜ್ಯ ಸರಕಾರ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದು ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆ ನೀಗಿಸುವ ನಿಟ್ಟಿನಲ್ಲಿ ಬಿಸಿಯೂಟ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ನಂತರ ಇಡೀ ಯೋಜನೆಯನ್ನು ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೂ ವಿಸ್ತರಣೆ ಮಾಡಿತ್ತು. ಇದರ ಭಾಗವಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಸುಮಾರು 1.18 ಲಕ್ಷ ಜನ ಬಿಸಿಯೂಟ ನೌಕರರನ್ನು ಮಾಸಿಕ 2000 ರೂಗಳ ಅತ್ಯಂತ ಕಡಿಮೆ ಗೌರವ ಧನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ನಮಗೆ ಗೌರವಧನ ನೀಡುವ ಬದಲು ಕನಿಷ್ಠ ಮಾಸಿಕ 10 ಸಾವಿರ ರೂ ವೇತನ ನೀಡಬೇಕು. ಹಾಗೆಯೇ ನಮ್ಮನ್ನು ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು ಎಂಬುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ, ಇದುವರೆಗೂ ರಾಜ್ಯ ಸರಕಾರ ಗಮನ ಹರಿಸಿಲ್ಲ. ಪ್ರತಿ ಭಾರಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿಯೂ ಕೇವಲ ಆಶ್ವಾಸನೆ ನೀಡಿ ಅಲ್ಲಿಂದ ಕಳುಹಿಸುವ ಪ್ರಯತ್ನವನ್ನು ಸಚಿವರುಗಳು ಮಾಡುತ್ತಿದ್ದಾರೆ. ಈ ಬಾರಿ ಈ ಹಿಂದಿನ ರೀತಿ ಕೇವಲ ಆಶ್ವಾಸನೆಗಳಿಗೆ ಬಲಿಯಾಗದೆ, ಸರಕಾರದಿಂದ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆಯ ಬಗ್ಗೆ ಸ್ಪಷ್ಟ ಆದೇಶ ಹೊರಡುವವರೆಗೆ ಸ್ವಾತಂತ್ರ ಉದ್ಯಾನವನದಿಂದ ಯಾರೂ ಕದಲುವುದಿಲ್ಲ. ಇದು ಅಕ್ಷರ ದಾಸೋಹ ನೌಕರರ ಸ್ಪಷ್ಟ ನಿಲುವು ಎಂದರು.
ಕೇಂದ್ರ ಸರಕಾರ ಕಳೆದ 2011 ರಿಂದಲೂ ಬಿಸಿಯೂಟ ಸೇರಿದಂತೆ ಸ್ಕೀಂ ನೌಕರರ ವೇತನ, ಸೇವಾ ಭದ್ರತೆ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸವಲತ್ತು ನೀಡುವಲ್ಲಿ ಗಮನಹರಿಸಿಲ್ಲ. ಅದರಲ್ಲಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಸಿಯೂಟ, ಐಸಿಡಿಎಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡಲಾಗಿದೆ. 2018-19ರ ಬಜೆಟ್‍ನಲ್ಲಿಯೂ ಈ ಮೂರು ವರ್ಗಗಳಿಗೆ ನೀಡುತ್ತಿದ್ದ ಅನುದಾನದಲ್ಲಿ 6000 ಕೋಟಿ ರೂಗಳನ್ನು ಕಡಿತಗೊಳಿಸಲಾಗಿದೆ. ರಾಜ್ಯ ಸರಕಾರ ಸಹ ಕೇಂದ್ರದ ಕಡೆ ಬೊಟ್ಟು ಮಾಡಿ, ಸ್ಕೀಂ ನೌಕರರನ್ನು ಕಡೆಗಣಿಸಿದೆ. ಈ ಎಲ್ಲಾ ಅಂಶಗಳನು ಮುಂದಿಟ್ಟುಕೊಂಡು ಈ ಹೋರಾಟ ರೂಪಿಸಲಾಗಿದೆ. ಫೆ.06 ರಂದು ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತುಮಕೂರು ಜಿಲ್ಲೆಯಿಂದ 2000 ಬಿಸಿಯೂಟ ನೌಕರರು ಭಾಗವಹಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಮುಖಂಡರಾದ ಗಿರೀಶ್, ಆಶ್ವಥನಾರಾಯಣ, ನಾಗಣ್ಣ, ಕಾಂತರಾಜು, ಶಶಿಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







