ಒತ್ತಡ, ಅಮಿಷದ ಬದಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ: ಡಾ ವೀಣಾ ಕುಮಾರಿ
ಮುದರಂಗಡಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಪಡುಬಿದ್ರೆ, ಫೆ. 4: ಯಾರದೇ ಒತ್ತಡಕ್ಕೆ ಅಥವಾ ಅಮಿಷಕ್ಕೊಳಗಾಗಿ ರಕ್ತದಾನ ಮಾಡದೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ ವೀಣಾ ಕುಮಾರಿ ಹೇಳಿದರು.
ಅವರು ಮುದರಂಗಡಿಯ ಚರ್ಚ್ ಹಾಲ್‌ನಲ್ಲಿ ರವಿವಾರ ರೋಟರಿ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯ ದಳ, ಅಲ್‌ಜಾಮಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಮುದರಂಗಡಿ, ಶ್ರೀ ದುರ್ಗಾ ಮಂದಿರ ನಾಗಬ್ರಹ್ಮಸ್ಥಾನ ಮುದರಂಗಡಿ, ಕೆಥೋಲಿಕ್ ಸಭಾ ಮುದರಂಗಡಿ, ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತ ನಿಧಿ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ ಮಾತನಾಡಿ, ಸಮಾಜದ ಜನರಲ್ಲಿ ರಕ್ತದಾನದ ಕುರಿತಾಗಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯತೆಯಿದೆ. ಯುವಜನರು ರಕ್ತದಾನದ ಅಗತ್ಯತೆಯ ಬಗ್ಗೆ ತಾವು ಅರಿತುಕೊಂಡು ಇತರರಿಗೂ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಮುದರಂಗಡಿ ಗ್ರಾಮ ಪಂ. ಅಧ್ಯಕ್ಷ ಡೇವಿಡ್ ಡಿಸೋಜ, ಮುದರಂಗಡಿಯ ಸುನ್ನೀ ಜಾಮಿಯಾ ಮಸ್ಜಿದ್‌ನ ಮೌಲಾನಾ ಮುಹಮ್ಮದ್ ಝಾಕಿ, ಸೈಂಟ್ ಫ್ರಾನ್ಸಿಸ್ ಚರ್ಚ್‌ನ ಅ.ವಂ. ಫ್ರಾನ್ಸಿಸ್ ಕ್ಷೇವಿಯರ್ ಲೆವಿಸ್, ವಿದ್ಯಾನಗರ ನಾಗಬ್ರಹ್ಮಸ್ಥಾನದ ಅರ್ಚಕರಾದ ಮಾಧವ ಭಟ್ ಆಲುಂಬೆ, ರೋಟರಿ ಸಮುದಾಯ ದಳದ ಅಧ್ಯಕ್ಷ ಲೋಹಿತಾಶ್ವ ಸುವರ್ಣ, ಅಲ್‌ಜಾಮಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ರಿಯಾಝ್ ನಝೀರ್ ಸಾಹೇಬ್, ಕಾರ್ಯದರ್ಶಿ ಮುಹಮ್ಮದ್ ಆತೀಫ್, ದುರ್ಗಾ ಮಂದಿರ ನಾಗಬ್ರಹ್ಮಸ್ಥಾನದ ಅಧ್ಯಕ್ಷ ಸದಾನಂದ ಎಂ.ಶೆಟ್ಟಿ, ಕಾರ್ಯದರ್ಶಿ ಮುರಳೀ ಆಚಾರ್ಯ, ಕೆಥೋಳಿಕ್ ಸಭಾದ ಅಧ್ಯಕ್ಷ ರೆಫಾಯಲ್ ಮಥಾಯಸ್, ಕಾರ್ಯದರ್ಶಿ ಸೆವ್ರಿನ್ ಪಿಂಟೋ, ಕಾರ್ಯಕ್ರಮ ನಿರ್ದೇಶಕರಾದ ಎಸ್.ಪಿ.ಬರ್ಬೋಝ, ಮುಹಮ್ಮದ್ ನಿಯಾಝ್, ಸುಧಾಕರ ಕೆ, ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.







