ರಾಜ್ಯದ ಎಲ್ಲ ಜನತೆಗೆ ಯುನಿವರ್ಸಲ್ ಆರೋಗ್ಯ ಕಾರ್ಡ್: ಸಚಿವ ಪ್ರಮೋದ್

ಉಡುಪಿ, ಫೆ.4: ರಾಜ್ಯ ಸರಕಾರ ರಾಜ್ಯದ ಎಲ್ಲ 6.5.ಕೋಟಿ ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿಗೆ ಉನ್ನತ ದರ್ಜೆಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯುನಿವರ್ಸಲ್ ಆರೋಗ್ಯ ಕಾರ್ಡ್‌ನ್ನು ಸದ್ಯವೇ ಜಾರಿಗೆ ತರಲಿದೆ. ಆರೋಗ್ಯ ವಿಮೆಯ ಪ್ರಿಮಿಯಂನ್ನು ರಾಜ್ಯ ಸರಕಾರವೇ ಪಾವತಿಸಿ, ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಭರಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಉಡುಪಿ ವಲಯ ಇವರ ಆಶ್ರಯದಲ್ಲಿ ಉಡುಪಿ ಆದರ್ಶ ಆಸ್ಪತ್ರೆ ಮತ್ತು ಸಹಕಾರ ಇಲಾ ಖೆಯ ಸಹಭಾಗಿತ್ವದಲ್ಲಿ ರವಿವಾರ ಆಸ್ಪತ್ರೆಯಲ್ಲಿ ಆಯೋಜಿಸಲಾದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೆಲೆ ಕಟ್ಟಲು ಸಾಧ್ಯವಿಲ್ಲದ ನಮ್ಮ ಅಮೂಲ್ಯ ಜೀವದ ಆರೋಗ್ಯವನ್ನು ಪ್ರತಿ ಆರು ತಿಂಗಳಿಗೆಗೊಮ್ಮೆ ತಪಾಸಣೆ ಮಾಡಬೇಕು. ಇಂತಹ ಪರೀಕ್ಷೆ ಮಾಡಿ ದಾಗ ಮಾತ್ರ ನಮ್ಮಲ್ಲಿರುವ ತೊಂದರೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ರೋಗವನ್ನು ತಿಳಿದರೆ ಗುಣಪಡಿಸಬಹುದಾಗಿದೆ. ಆದರೆ ಅದನ್ನು ನಿರ್ಲಕ್ಷ ಮಾಡಿದರೆ ಜೀವಕ್ಕೆ ಅಪಾಯವಾಗಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆದರ್ಶ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಭಾರತದಲ್ಲಿ ಸ್ವಾತಂತ್ರ್ಯ ಕಾಲದಲ್ಲಿ ಮಾನ ವನ ಸರಾಸರಿ ಜೀವಿತಾವಧಿ ಕೇವಲ 45 ವರ್ಷ ಇತ್ತು. ಇದು ಈಗ ಗಣನೀಯವಾಗಿ ಸುಧಾರಣೆಯಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಅನಿವಾರ್ಯವಾಗಿದೆ ಎಂದರು.
ಉಡುಪಿ ಸಹಕಾರ ಇಲಾಖೆ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಯಶಸ್ವಿನಿ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ.ಎ.ರಾಜಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಪ್ರಭಾಕರ್ ಕೆ., ಉಪಾಧ್ಯಕ್ಷರುಗಳಾದ ರೋಶನ್ ಕಾಪು, ಜಯ ಸುವರ್ಣ, ಗೌರವ ಸಲಹೆಗಾರರಾದ ಯಾದವ ಶೆಟ್ಟಿಗಾರ್, ವಿಲ್ಸನ್ ಅಂಚನ್, ಜೊತೆ ಕಾರ್ಯದರ್ಶಿಗಳಾದ ವಿನಯಕುಮಾರ್, ಸುಧೀರ್ ಭಟ್, ಜೂಮೋಲ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಎಂ., ಆಸ್ಪತ್ರೆ ಯ ಪ್ರಬಂಧಕ ಕ್ವಾಡ್ರಸ್, ವೈದ್ಯಕೀಯ ಶಿಬಿರಗಳ ನಿರ್ವಾಹಕ ರಾಜೇಂದ್ರ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಸ್ವಾಗತಿಸಿ ದರು. ನಿಕಟಪೂರ್ವ ಅಧ್ಯಕ್ಷ ಉದಯಕಿರಣ್ ವಂದಿಸಿದರು. ಪ್ರವೀಣ್ ಕುಾರ್ ಕಾರ್ಯಕ್ರಮ ನಿರೂಪಿಸಿದರು.







