ಭಾರತದ್ದು ಧರ್ಮಾಧಾರಿತ ಸಂಸ್ಕೃತಿ: ಶ್ರೀ ಸ್ವಾಮಿ ವಿನಾಯಕಾನಂದ ಜೀ

ಉಡುಪಿ, ಫೆ.4: ಭಾರತ ಸಂಸ್ಕೃತಿಯು ಧರ್ಮ ಆಧಾರಿತವಾದರೆ ಪಾಶ್ಚಿ ಮಾತ್ಯ ದೇಶಗಳು ಸುಖಭೋಗ ಆಧಾರಿತ ಸಂಸ್ಕೃತಿಯನ್ನು ಹೊಂದಿವೆ. ಈ ಆಧಾರ ಬೇಧಗಳ ಪರಿವರ್ತನೆ ಅಗತ್ಯ ಎಂದು ಬೈಲೂರು ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವಿನಾಯಕಾನಂದಜೀ ಮಹಾರಾಜ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಶ್ರೀರಾಮ ಕೃಷ್ಣ ಶಾರದಾ ಆಶ್ರಮ ಬೈಲೂರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಸಂಸ್ಕೃತ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಾರತದಲ್ಲಿ ಸಾಕಷ್ಟು ಜ್ಞಾನ ಭಂಡಾರ ಇದೆ. ಅದನ್ನು ಇಡೀ ಜಗತ್ತಿಗೆ ನೀಡಿದರೆ ಮಾತ್ರ ಶಾಂತಿ ಸಂಸ್ಥಾಪನೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇಡೀ ಪ್ರಪಂಚವೇ ನಾಶವಾಗುತ್ತದೆ. ಸಂಸ್ಕೃತ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕ. ಆದರೆ ದೇಶದಲ್ಲಿ ಪಾಶ್ಚಾತ್ಯ ಭಾಷೆಯೊಂದಿಗೆ ಸಂಸ್ಕೃತಿಯೂ ಆಮದಾಗುತ್ತಿರು ವುದು ಅಪಾಯಕಾರಿ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ.ವಿಜಯ ಬಲ್ಲಾಳ ಮಾತನಾಡಿ, ಎಲ್ಲ ಶಾಸ್ತ್ರಗಳ ಮೂಲ ಸಂಸ್ಕೃತದಲ್ಲಿ ಉಲ್ಲೇಖವಿದೆ. ಸಂಸ್ಕೃತ ಎಲ್ಲ ಭಾಷೆಗಳ ತವರು ಮನೆ. ಎಲ್ಲದಕ್ಕೂ ನಾವು ಇಂದು ಪರಕೀಯರನ್ನು ಅನುಕರಣೆ ಮಾಡುತ್ತಿದ್ದೇವೆ. ಆದರೆ ಅವರು ಈಗ ನಮ್ಮ ಯೋಗವನ್ನು ಹೆಚು್ಚ ಹೆಚ್ಚು ಕಲಿಯುತ್ತಿದ್ದಾರೆ ಎಂದರು.
ಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಶ ಕಾಕತ್ಕರ ದಿಕ್ಸೂಚಿ ಭಾಷಣ ಮಾಡಿ, ರಾಷ್ಟ್ರದ ಉದ್ಧಾರಕ್ಕೆ ಸಂಸ್ಕೃತ ಅಗತ್ಯ. ಸಂಸ್ಕೃತ ನಿರ್ಜೀವ ಭಾಷೆಯಲ್ಲ. ಸಂಸ್ಕೃತದಲ್ಲಿ ಪ್ರೌಢತೆ ಹಾಗೂ ಸರಳತೆ ಎರಡೂ ಇದೆ. ಶಾಸ್ತ್ರಗಳು ಪ್ರೌಢವಾಗಿದ್ದು, ಸಂಭಾಷಣೆ ಸರಳವಾಗಿದೆ. ಇಂಥ ಭೇದಗಳು ಎಲ್ಲಾ ಭಾಷೆಗಳಲ್ಲೂ ಸಾಮಾನ್ಯವಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಗೋಪಿನಾಥ ಕಾಮತ್, ಪಲಿಮಾರು ಮಠದ ಬಲರಾಮ ಭಟ್ ಉಪಸ್ಥಿತರಿದ್ದರು. ಸಂಸ್ಕೃತ ಭಾರತಿ ಮಂಡಲಾಧ್ಯಕ್ಷ ಪಿ.ಶ್ರೀಧರ್ ಆಚಾರ್ಯ ಸ್ವಾಗತಿಸಿದರು. ವೆಂಕಟರಮಣ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕ ಆರ್.ಟಿ.ಭಟ್ ಕಾರ್ಯಕ್ರಮ ನಿರೂಪಿಸಿದರು.







