ನಂಬರ್-1 ರಾಜ್ಯಕ್ಕೆ ಸ್ವಾಗತ: ಟ್ವಿಟರ್ ಮೂಲಕ ಪ್ರಧಾನಿಗೆ ಸಿದ್ದರಾಮಯ್ಯ ಸ್ವಾಗತ ಕೋರಿದ್ದು ಹೀಗೆ

ಬೆಂಗಳೂರು, ಫೆ. 4: ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ಮೂಲಕ ರವಿವಾರ ಸ್ವಾಗತ ಕೋರಿದ್ದಾರೆ.
‘ನಮ್ಮ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ನಿಮಗೆ ಸ್ವಾಗತ. ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರ ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥ ಮಾಡಲು ಸಹಕಾರ ನೀಡಬೇಕೆಂದು ಕರ್ನಾಟಕದ ಜನತೆ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
ನಂಬರ್ 1 ರಾಜ್ಯಕ್ಕೆ ಸ್ವಾಗತ: ಬಂಡವಾಳ ಹೂಡಿಕೆ, ಬಯೋಟೆಕ್ನಾಲಜಿ ರಫ್ತಿನಲ್ಲಿ, ರೇಶ್ಮೆ ಉತ್ಪಾದನೆಯಲ್ಲಿ, ಐಟಿ ರಫ್ತಿನಲ್ಲಿ, ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆಯಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದ್ದು, ರಾಜ್ಯದ ಯಶಸ್ಸು ದೇಶದ ಹೆಮ್ಮೆ ಪಡುವಂತಹದ್ದು ಎಂದು ಮತ್ತೊಂದು ಟ್ವಿಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಬಿಎಸ್‌ವೈ ಟೀಕೆ: ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ಭ್ರಷ್ಟಾಚಾರದಲ್ಲಿ. ರಾಜ್ಯದಲ್ಲಿ 3500 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟ್ವಿಟರ್ ಮೂಲಕ ಟೀಕಿಸಿದ್ದಾರೆ.





