ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕಡ್ಡಾಯ: ಸಚಿವ ತನ್ವೀರ್ ಸೇಠ್

ಬೆಂಗಳೂರು, ಫೆ.4: ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ರವಿವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳಾ ಮಂಟಪದಲ್ಲಿ ಆಯೋಜಿಸಿದ್ದ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ್ವಿತೀಯ ಪಿಯು ಪರೀಕ್ಷೆ ಪ್ರತಿ ವಿದ್ಯಾರ್ಥಿಗೆ ನಿರ್ಣಾಯಕ ಹಂತವಾಗಿರುತ್ತದೆ. ಪರೀಕ್ಷೆಯನ್ನು ಎದುರಿಸುವುದು ವಿದ್ಯಾರ್ಥಿಗಳೇ ಆದರೂ, ಪೋಷಕರು ಹಾಗೂ ಶಿಕ್ಷಕರು ಪಿಯು ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುತ್ತಾರೆ. ಹೀಗಾಗಿ ಶಿಕ್ಷಣ ಇಲಾಖೆ ಪರೀಕ್ಷೆಯನ್ನು ಪಾರದರ್ಶಕವಾಗಿ, ಸುಸೂತ್ರವಾಗಿ ನಡೆಸಲು ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಪರೀಕ್ಷಾ ಅವಧಿಯನ್ನು ಚಿತ್ರೀಕರಿಸಲಾಗುವುದು ಎಂದು ಅವರು ಹೇಳಿದರು.
ಒತ್ತಡ ನಿವಾರಣೆ ಮುಖ್ಯ: ವಿದ್ಯಾರ್ಥಿಗಳು ಪರಿಕ್ಷೆಗಾಗಿ ವರ್ಷಪೂರ್ತಿ ಕಠಿಣ ಅಭ್ಯಾಸ ಮಾಡಿರುತ್ತಾರೆ. ಆದರೆ, ಪರೀಕ್ಷಾ ದಿನಗಳು ಹತ್ತಿರವಾಗುತ್ತಿದ್ದಂತೆ ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಅನಾರೋಗ್ಯ ಹಾಗೂ ಮರೆವು ರೋಗಕ್ಕೆ ತುತ್ತಾಗುತ್ತಾರೆ. ಈ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳಿದರು.
ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಪೋಷಕರ ಸಹಕಾರ ಅಗತ್ಯವಾಗಿರುತ್ತದೆ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು. ಹಾಗೂ ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆಗಳ ನೆಪದಲ್ಲಿ ಒತ್ತಡ ಹಾಕಬಾರದು. ತಮ್ಮ ಮಕ್ಕಳ ಸಾಮರ್ಥ್ಯವನ್ನು ಅರಿತು ಸಲಹೆ-ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ವಿಧಾನಪರಿಷತ್‌ನ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆ ವಿದ್ಯಾರ್ಥಿಗಳಿಗೆ ನಿರ್ಣಾಯಕ ಘಟ್ಟವಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪೂರಕವಾಗಿ ತಯಾರಿ ಮಾಡುವಂತಹ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಕೆಲಸವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಿಯು ಪಠ್ಯ, ಪರೀಕ್ಷೆಗೆ ಸಂಬಂಧಿಸಿ ಹಲವು ಪ್ರಶ್ನೆಗಳನ್ನು ಸಚಿವ ತನ್ವೀರ್ ಸೇಠ್ ಬಳಿ ಕೇಳಿ ಉತ್ತರ ಪಡೆದರು.
‘ಪ್ರತಿಷ್ಟಿತ ಕಾಲೇಜುಗಳಿಗೆ ದಾಖಲಾದ ಮಾತ್ರಕ್ಕೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದಿಲ್ಲ. ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ಎಷ್ಟೇ ಮೂಲಭೂತ ಸೌಕರ್ಯವಿದ್ದರೂ ವಿದ್ಯಾರ್ಥಿಗಳಲ್ಲಿ ತಾವು ಕಲಿಯಬೇಕೆಂಬ ಅದಮ್ಯ ಆಸಕ್ತಿಯಿಲ್ಲದೆ ಹೋದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿಕ್ಷಣದ ಕುರಿತು ಆಸಕ್ತಿಯನ್ನು ಮೂಡಿಸುವಂತಹ ಕೆಲಸವಾಗಬೇಕಿದೆ’
-ತನ್ವೀರ್ ಸೇಠ್, ಪ್ರಾಥಮಿಕ ಶಿಕ್ಷಣ ಸಚಿವ







