ಕುಲಶೇಖರ-ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
40 ವರ್ಷದ ಸಮಸ್ಯೆಗೆ ಕೊನೆಗೂ ಮುಕ್ತಿ

ಮಂಗಳೂರು, ಫೆ. 4: ರೈಲ್ವೆ ಇಲಾಖೆಯ ತಾಂತ್ರಿಕ ಕಾರಣಗಳಿಂದ ಕಳೆದ 40 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮನಪಾ ವ್ಯಾಪ್ತಿಯ ಕುಲಶೇಖರ-ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ. ಆರ್.ಲೋಬೊ ರವಿವಾರ ಚಾಲನೆ ನೀಡಿದ್ದು, ಇದರೊಂದಿಗೆ ಹಲವು ವರ್ಷಗಳ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಈ ಸಂದರ್ಭ ಮಾತನಾಡಿದ ಅವರು, 40 ವರ್ಷದಿಂದ ಈ ಭಾಗದ ಜನತೆ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅನುದಾನವಿದ್ದರೂ ರೈಲ್ವೆ ಇಲಾಖೆಯ ಅನುಮತಿಯಿಲ್ಲದೆ ಕಾಮಗಾರಿ ಕಷ್ಟವಾಗಿತ್ತು. ಪ್ರಸ್ತುತ ರೈಲ್ವೆ ಬೋರ್ಡ್ ಅಧ್ಯಕ್ಷರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಂಡು ಅನುಮತಿ ಪಡೆಯಲಾಗಿದೆ. ಆರಂಭದಲ್ಲಿ 85 ಲಕ್ಷ ರೂ.ಅನುದಾನದಲ್ಲಿ 1 ಕಿ.ಮೀ.ಯಷ್ಟು ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ನಂತರ ರಾಜ್ಯ ಸರಕಾರದ 10.50 ಕೋ.ರೂ. ವಿಶೇಷ ಅನುದಾನದಿಂದ ಕಣ್ಣಗುಡ್ಡೆ ರಸ್ತೆಯು ಕಣ್ಣೂರುವರೆಗೆ ಅಭಿವೃದ್ಧಿಗೊಳ್ಳಲಿದೆ. ಈ ಭಾಗದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣವಾಗಲಿದೆ ಎಂದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ಆಡಳಿತಕ್ಕೆ ಸವಾಲಾಗಿದ್ದ ಕಣ್ಣಗುಡ್ಡೆ ರಸ್ತೆ ಅಭಿವೃದ್ಧಿಗೆ ಶಾಸಕರು ರೈಲ್ವೆ ಇಲಾಖೆಗೆ ಒತ್ತಡ ಹೇರಿ ಕಾಮಗಾರಿಗೆ ಅನುಮತಿ ದೊರಕಿಸಿಕೊಟ್ಟಿದ್ದಾರೆ. ಪಾಲಿಕೆ ಕೂಡ ರೈಲ್ವೆ ಜಮೀನನ್ನು ಲೀಸಿಗೆ ಪಡೆಯುವುದಕ್ಕಾಗಿ 1.32 ಕೋ.ರೂ.ಗಳನ್ನು ನೀಡಿದೆ ಎಂದರು.
ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಕೆ. ಪ್ರಸ್ತಾವನೆಗೈದರು. ಈ ಸಂದರ್ಭ ಮನಪಾ ಸಚೇತಕ ಎಂ.ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಕಾರ್ಪೊರೇಟರ್‌ಗಳಾದ ಬಿ. ಪ್ರಕಾಶ್, ನವೀನ್ ಡಿಸೋಜ, ಕೇಶವ ಮರೋಳಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಇಂಜಿನಿಯರ್ ಲಿಂಗೇಗೌಡ, ಕೆಎಸ್ಸಾರ್ಟಿಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಬ್ಳಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ವಿಶ್ವಾಸ್‌ಕುಮಾರ್ ದಾಸ್, ಪ್ರಭಾಕರ ಶ್ರೀಯಾನ್, ಡೆನ್ನಿಸ್ ಡಿಸಿಲ್ವ ಉಪಸ್ಥಿತರಿದ್ದರು.







