ಮಹದಾಯಿ ಬಗ್ಗೆ ಪ್ರಧಾನಿ ಮೌನ ವಹಿಸಿರುವುದು ನೋವಿನ ಸಂಗತಿ: ವಾಟಾಳ್

ಬೆಂಗಳೂರು, ಫೆ. 4: ಮಹದಾಯಿ ಯೋಜನೆ ಆಗ್ರಹಿಸಿ ರಾಜ್ಯಾದ್ಯಂತ ರೈತರು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸಿ ಈ ಬಗ್ಗೆ ಮೌನ ವಹಿಸಿರುವ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರ್ಗಮಿಸಿದ ಬೆನ್ನಲ್ಲೇ ಅವರ ವಿರುದ್ಧ ರೈತರು ಕೋಪಗೊಂಡಿದ್ದಾರೆ. ಮೋದಿ ಅಣಕು ಶವ ಯಾತ್ರೆ ನಡೆಸಿ ಪ್ರತಿಭಟಿಸಿದರು.
ಪ್ರಧಾನಿ ಮೋದಿ ತಮ್ಮ ನೇತೃತ್ವದ ಕೇಂದ್ರ ಸರಕಾರದ ಸಾಧನೆಯನ್ನು ವಿವರಿಸುತ್ತಾ, ಕೇವಲ ರಾಜಕೀಯ ಉದ್ದೇಶಕ್ಕಾಗಿ ರಾಜ್ಯ ಸರಕಾರ ವಿರುದ್ಧ ಕೆಲವೊಂದು ಗಂಭೀರ ಆರೋಪ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮಹದಾಯಿ ಬಗ್ಗೆ ಪ್ರಧಾನಿ ಮೌನ ವಹಿಸಿರುವುದು ನೋವಿನ ಸಂಗತಿಯಾಗಿದೆ. ನಮ್ಮ ಹೋರಾಟಕ್ಕೆ ಮೋದಿ ಸ್ಪಂದಿಸಿಲ್ಲ. ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡದ ಜನತೆಗೆ ಮೋದಿ ಮೋಸ ಮಾಡಿದ್ದಾರೆ ಎಂದು ಫಿಲ್ಮ್ ಛೆಂಬರ್ ಅಧ್ಯಕ್ಷ ಸಾರಾ ಗೋವಿಂದ್ ಆರೋಪಿಸಿದರು.





