ಅಮಿತ್ ಶಾ ರಾಜ್ಯಕ್ಕೆ ಬಂದಾಗೆಲ್ಲಾ ಕೋಮುಗಲಭೆ: ಸಿದ್ದರಾಮಯ್ಯ

ಬೆಂಗಳೂರು, ಫೆ. 4: ಬಿಜೆಪಿಯ ರಾಷ್ಟ್ರಿಯಾಧ್ಯಕ್ಷ ಅಮಿತ್ ಶಾ ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿಯೇ, ಅವರು ಬಂದಾಗೆಲ್ಲಾ ಕೋಮುಗಲಭೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆರ್ಯ ವೈಶ್ಯ ಜಾಗೃತಿ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡಿ ಕೋಮುಗಲಭೆ ಸೃಷ್ಟಿಸುವ ತಂತ್ರ ಹೆಣೆಯುತ್ತಿರುವುದರಿಂದ ಅವರ ವ್ಯಕ್ತಿತ್ವ ಏನೆಂಬುದು ಜನರಿಗೆ ಈಗಾಗಲೇ ಅರಿವಾಗಿದೆ ಎಂದು ಟೀಕಿಸಿದರು.
ಅಲ್ಲದೆ, ಸಂಸದ ಪ್ರತಾಪ್‌ಸಿಂಹ, ಅಮಿತ್ ಶಾ ಉದ್ದೇಶವನ್ನು ಈಗಗಾಲೇ ಹೊರ ಹಾಕಿದ್ದಾರೆ. ಶಾ ಅವರಿಗೆ ಕೋಮುಗಲಭೆ ಎಬ್ಬಿಸುವುದನ್ನು ಬಿಟ್ಟು ಜನಪರ ಕೆಲಸ ಮಾಡುವುದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.
ರಾಜ್ಯದ ಮೇಲೆ ಪರಿಣಾಮವಿಲ್ಲ: ಪ್ರಧಾನಿ ಮೋದಿ ಅವರ ಭೇಟಿಯಿಂದ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಪ್ರಧಾನಿ ಮೋದಿ ರಾಜ್ಯ ಭೇಟಿ ನೀಡುತ್ತಿರುವುದು ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಪ್ರಧಾನಿ ಮೋದಿ ಅವರು ಒಂದು ಪಕ್ಷದ ನಾಯಕರಾಗಿ ಆ ಪಕ್ಷದ ಪರ ಮತ ಕೇಳಲು ಬರುತ್ತಿದ್ದಾರೆ. ಇದರಿಂದ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಅಥವಾ ಬದಲಾವಣೆಯಾಗಲಿ ಉಂಟು ಮಾಡುವುದಿಲ್ಲ. ಎಲ್ಲಾ ನಾಯಕರ ಚುನಾವಣಾ ಪ್ರಚಾರದಂತೆ ಬಿಜೆಪಿಯ ಪರಿವರ್ತನಾ ರ್ಯಾಲಿಯೂ ಮಾಮೂಲಿ ಪ್ರಚಾರ ಸಭೆ ಎಂದರು.
ಸುಳ್ಳು ಹೇಳುವ ಜಾಯಮಾನ: ಸುಳ್ಳು ಹೇಳುವುದು, ಟೀಕೆ ಮಾಡುವುದನ್ನು ಬಿಜೆಪಿಯವರು ಮೈಗೂಡಿಸಿಕೊಂಡಿದ್ದಾರೆ. ಏಕೆಂದರೆ ಬಿಜೆಪಿ ಜನಪರವಾಗಿಲ್ಲ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಯಾರು ಜನಪರವಾಗಿರುವುದಿಲ್ಲವವೋ ಅವರು ಸುಳ್ಳನ್ನು ಮೈಗೂಡಿಸಿಕೊಳ್ಳುತ್ತಾರೆ. ಕರ್ನಾಟಕದ ಜನತೆ ರಾಜಕೀಯವಾಗಿ ಬುದ್ದಿವಂತರಿದ್ದಾರೆ ಎಂದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಿನ್ನೆ ಸುದ್ದಿಗೋಷ್ಠಿಯಲ್ಲಿ ನೀಡಿದ ಅಂಕಿ-ಅಂಶಗಳು ನೂರಕ್ಕೆ ನೂರು ಸರಿಯಾಗಿವೆ. ಅಮಿತ್ ಶಾ ಸುಳ್ಳು ಹೇಳುತ್ತಾ ಏನೇನೋ ಮಾತನಾಡುತ್ತಾರೆ. ರಾಜ್ಯದಲ್ಲಿ ಸಂಗ್ರಹವಾದ ತೆರಿಗೆ ಹಣದಲ್ಲಿ ಶೇ.42ರಷ್ಟು ದೇಶಕ್ಕೆ ನೀಡಿದ್ದು, ಅದರಲ್ಲಿ ನಮ್ಮ ರಾಜ್ಯದ ಪಾಲಿದೆ ಎಂದು ಸಿದ್ದರಾಮಯ್ಯ ನುಡಿದರು.







