ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ 1ಲಕ್ಷ ಕೋಟಿ ರೂ.ಮೀಸಲು: ಯಡಿಯೂರಪ್ಪ
ಪರಿವರ್ತನಾ ಯಾತ್ರೆ ಸಮಾರೋಪ

ಬೆಂಗಳೂರು, ಫೆ. 4: ರಾಜ್ಯದ ಜನತೆ ನೀರಿಗಾಗಿ ಸಂಕಷ್ಟ ಎದುರಿಸುತ್ತಿರುವುದನ್ನು ತಾನು ಕೈಗೊಂಡಿದ್ದ ಪ್ರವಾಸದ ಸಂದರ್ಭದಲ್ಲಿ ಕಣ್ಣಾರೆ ನೋಡಿದ್ದೇನೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ 1ಲಕ್ಷ ಕೋಟಿ ರೂ. ಮೀಸಲಿಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಕನಸನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
‘ಕರ್ನಾಟಕ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನಿರ್ಗಮನದ ಬಾಗಿಲಲ್ಲಿ ನಿಂತಿದೆ’ ಎಂದು ಹಿಂದಿಯಲ್ಲೇ ಮಾತನಾಡಿದ ಯಡಿಯೂರಪ್ಪ, ನಿಮ್ಮ ಕನಸಿನ ‘ಕಾಂಗ್ರೆಸ್ ಮುಕ್ತ ಭಾರತ’ವನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುತ್ತೇವೆ. ಈ ವಾಗ್ದಾನವನ್ನು ನಾನು ನಿಮಗೆ ನೀಡುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಸರಕಾರದ ಮೂರು ವರ್ಷದ ಸಾಧನೆ, ಬಿಜೆಪಿ ಸರಕಾರದ ಐದು ವರ್ಷಗಳ ಸಾಧನೆ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರಿಯಾಗಿದ್ದು, ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಎಸಿಬಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಲ್ಲವಾದರೆ ಸಿದ್ದರಾಮಯ್ಯ ಸಂಪುಟದ ಸಹೊದ್ಯೋಗಿಗಳು ಜೈಲಿನಲ್ಲಿ ಇರಬೇಕಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದ ಆಡಳಿತಾವಧಿಯಲ್ಲಿ 6521ಕೊಲೆ, 3500ಕ್ಕೂ ಹೆಚ್ಚು ಅತ್ಯಾಚಾರ, 24ಕ್ಕೂ ಅಧಿಕ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗಳು ನಡೆದಿವೆ ಎಂದ ಯಡಿಯೂರಪ್ಪ, ಸಮಾಜ ವಿರೋಧಿಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ ಎಂದು ಟೀಕಿಸಿದರು.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಶಯದಂತೆ ದೇಶವನ್ನು ಪ್ರಧಾನಿ ಮೋದಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ದೇಶದ ಗಡಿ ರಕ್ಷಣೆ ಮಾಡುವುದರ ಜತೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತಂದಿದ್ದಾರೆ ಎಂದ ಅವರು, ಕೇಂದ್ರ ಸರಕಾರದೊಂದಿಗೆ ಹೆಜ್ಜೆ ಹಾಕುವ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರಕಾರ ನೀಡುವ ಪ್ರತಿ ಪೈಸೆ ಹಣವನ್ನು ರಾಜ್ಯದ ಮನೆ-ಮನೆಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 3 ತಿಂಗಳು ಮನೆ ಮಠ ಬಿಟ್ಟು ಹೊರಡಿ, ಐದು ವರ್ಷ ನೆಮ್ಮದಿಯಿಂದ ಇರಬಹುದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.







