ಕೇಂದ್ರ ಸರಕಾರದ ಹುದ್ದೆಗಳ ಸಂಖ್ಯೆ 2 ವರ್ಷಗಳಲ್ಲಿ 2.53 ಲಕ್ಷ ಏರಿಕೆ

ಹೊಸದಿಲ್ಲಿ,ಫೆ.4: ಕಳೆದ ಎರಡು ವರ್ಷಗಳಲ್ಲಿ ಅಂದಾಜು 2.53 ಲಕ್ಷ ಕೇಂದ್ರ ಸರಕಾರಿ ಹುದ್ದೆಗಳು ಸೃಷ್ಟಿಯಾಗಿವೆ ಎನ್ನುವುದನ್ನು ಬಜೆಟ್-2018 ಬಹಿರಂಗಗೊಳಿಸಿದೆ.
ಬಜೆಟ್ ದಾಖಲೆಗಳಂತೆ 2018, ಮಾರ್ಚ್ 31ರಂದು ಕೇಂದ್ರ ಸರಕಾರದ ಸಂಸ್ಥೆಗಳಲ್ಲಿಯ ಹುದ್ದೆಗಳ ಸಂಖ್ಯೆ 35.05 ಲಕ್ಷಗಳಾಗಿರಲಿದೆ. ಮಾರ್ಚ್ 2016ರಲ್ಲಿದ್ದ 32.52 ಲ.ಹುದ್ದೆಗಳಿಗೆ ಹೋಲಿಸಿದರೆ ಇದು 2.53 ಲ.ಗಳಷ್ಟು ಹೆಚ್ಚಾಗಿದೆ.
2016 ಮತ್ತು 2017ರ ನಡುವೆ ಕೇಂದ್ರ ಸರಕಾರದ ಇಲಾಖೆಗಳಲ್ಲಿ ಸುಮಾರು 2.27 ಲ.ಹುದ್ದೆಗಳು ಹೊಸದಾಗಿ ಸೇರ್ಪಡೆಗೊಂಡಿವೆ ಎಂದು ಅಂದಾಜಿಸಲಾಗಿದೆ.
ಬಜೆಟ್ ಅಂಕಿಅಂಶಗಳಂತೆ ಕೇಂದ್ರ ಸರಕಾರಿ ಇಲಾಖೆಗಳಲ್ಲಿ 2017,ಮಾ.1ಕ್ಕೆ ಇದ್ದಂತೆ ಅಂದಾಜು 34.8 ಲ.ಜನರು ಕೆಲಸ ಮಾಡುತ್ತಿದ್ದರು.
ಹೊಸಹುದ್ದೆಗಳ ಸಿಂಹಪಾಲು ಪೋಲಿಸ್ ಇಲಾಖೆಗಳಲ್ಲಿ ಸೃಷ್ಟಿಯಾಗಿದ್ದರೂ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯೂ ಹುದ್ದೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕೃಷಿ,ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯಲ್ಲಿ ಮಾ.1ರೊಳಗೆ 1,944 ಹೆಚ್ಚುವರಿ ಹುದ್ದೆಗಳು ಸೇರ್ಪಡೆಗೊಳ್ಳಲಿವೆ. ವರದಿ ಅವಧಿಯಲ್ಲಿ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 1,519, ಅಣುಶಕ್ತಿ ಇಲಾಖೆಯಲ್ಲಿ 6,279 ಹೊಸಹುದ್ದೆಗಳು ಸೃಷ್ಟಿಯಾಗಿವೆ ಎಂದು ಅಂದಾಜಿಸಲಾಗಿದೆ. ಮಾ.1ರೊಳಗೆ ನಾಗರಿಕ ವಾಯುಯಾನ ಸಚಿವಾಲಯಕ್ಕೆ 1,197, ಸಂಸ್ಕೃತಿ ಸಚಿವಾಲಯಕ್ಕೆ 3,024, ಗೃಹ ಸಚಿವಾಲಯಕ್ಕೆ(ಪೊಲೀಸ್,ಸಂಪುಟ ಮತ್ತು ಅದರಡಿಯ ಪೊಲೀಸ್ ಇಲಾಖೆಗಳನ್ನು ಹೊರತುಪಡಿಸಿ) 5,836 ಹೊಸ ಹುದ್ದೆಗಳು ಸೇರ್ಪಡೆಯಾಗಲಿವೆ.
ಗೃಹ ಸಚಿವಾಲಯದಡಿಯ ಪೊಲೀಸ್ ಇಲಾಖೆಗಳಿಗೆ ಸುಮಾರು ಒಂದು ಲಕ್ಷ ಹುದ್ದೆಗಳು ಹೊಸದಾಗಿ ಸೇರ್ಪಡೆಗೊಂಡಿದ್ದು, ಮಾರ್ಚ್ 2018ರ ವೇಳೆಗೆ ಒಟ್ಟು ಹುದ್ದೆಗಳ ಸಂಖ್ಯೆ 11,25,093ಕ್ಕೆ ಹೆಚ್ಚಲಿದೆ.
ಮಾರ್ಚ್ 2018ರೊಳಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿಯ ಹುದ್ದೆಗಳ ಸಂಖ್ಯೆ 1,196ರಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಇದೇ ರೀತಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ 2,234 ಹುದ್ದೆಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿವೆ.
ಮಾರ್ಚ್ 2018ರ ವೇಳೆಗೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಲ್ಲಿ ಅಂದಾಜು 772 ಹುದ್ದೆಗಳು ಮತ್ತು ಗಣಿ ಸಚಿವಾಲಯದಲ್ಲಿ 772 ಹುದ್ದೆಗಳು ಸೇರ್ಪಡೆಯಾಗಲಿವೆ.







