ಉಡುಪಿ: ಸ್ಪರ್ಧೆಗಾಗಿ ಅರ್ಧ ತಾಸಿನಲ್ಲಿ 228 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ!

ಉಡುಪಿ, ಫೆ.4: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಉಡುಪಿ ಗಾಂಧಿ ಆಸ್ಪತ್ರೆ ಸಹಯೋಗದಲ್ಲಿ ‘ನಮ್ಮ ದೇಶದ ಸ್ವಚ್ಚತೆ ನಮ್ಮೆಲ್ಲರ ಹೊಣೆ’ ಘೋಷ ವಾಕ್ಯದ ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಆರಿಸುವ ಸ್ಪರ್ಧೆಯನ್ನು ರವಿವಾರ ನಗರದ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಉಡುಪಿಯಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ 45 ಬಾಲಕರು ಹಾಗೂ 15 ಬಾಲಕಿಯರು ಸೇರಿದಂತೆ ಒಟ್ಟು 60 ಮಂದಿ ಸ್ಪರ್ಧಾಳು ಗಳು ಭಾಗವಹಿಸಿದ್ದು, ಸ್ಪರ್ಧೆಗೆ ನೀಡಿದ ಅರ್ಧ ಗಂಟೆ ಅವಧಿಯಲ್ಲಿ ಭುಜಂಗ ಪಾರ್ಕಿನ ಸುತ್ತಮುತ್ತ ಎಸೆಯಲಾಗಿದ್ದ ಒಟ್ಟು 228ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು.
ಬಾಲಕರು ಒಟ್ಟು 156.480 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರೆ, ಬಾಲಕಿಯರು ಒಟ್ಟು 71.540 ಕೆಜಿ ತ್ಯಾಜ್ಯ ಸಂಗ್ರಹಿಸಿದರು. ಬಾಲಕರಲ್ಲಿ ಅತಿ ಹೆಚ್ಚು 13.340 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಿದ ಕುಮಾರ್ ಮತ್ತು ಬಾಲಕಿಯರಲ್ಲಿ ಅತಿಹೆಚ್ಚು 6.930ಕೆ.ಜಿ. ತ್ಯಾಜ್ಯ ಸಂಗ್ರಹಿಸಿದ ಶ್ರುತಿ ಶೆಟ್ಟಿ ಪ್ರಥಮ ಬಹು ಮಾನ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಹರೀಶ್ ದ್ವಿತೀಯ, ಯಶವಂತ ತೃತೀಯ ಮತ್ತು ಬಾಲಕಿಯರ ವಿಭಾಗದಲ್ಲಿ ಸಾಧನಾ ದ್ವಿತೀಯ, ಶಿಲ್ಪಾಶೆಟ್ಟಿ ತೃತೀಯ ಸ್ಥಾನ ಪಡೆದರು.
ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾ ಧಿಕಾರಿ ಜಿ.ನಳಿನಿ, ಗಾಂಧಿ ಆಸ್ಪತ್ರೆ ವ್ಯವಸ್ಥಾಪಕ ವ್ಯಾಸರಾಯ ತಂತ್ರಿ, ಹಿರಿಯ ನಾಗರಿಕ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ರಾವ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿ ಕಾರಿ ಸುಮ ಹೆಗ್ಡೆ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸಮಾಜ ಸೇವಕರಾದ ವಿಶು ಶೆಟ್ಟಿ, ತಾರನಾಥ ಮೆಸ್ತ, ಶೇಷಗಿರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







