ಯುವಕರು ಸಮಾಜಮುಖಿಯಾಗಿ ಸಾಧನೆ ಮಾಡಿ-ಶಕುಂತಳಾ ಶೆಟ್ಟಿ
ರಾಜ್ಯ ಯುವಜನ ಮೇಳ ಸಮಾರೋಪ ಸಮಾರಂಭ

ಪುತ್ತೂರು, ಫೆ. 4: ಯುವ ಸಮುದಾಯವು ಸಮಾಜಮುಖಿಯಾಗಿ ಸಾಧನೆ ಮಾಡುವುದರೊಂದಿಗೆ ಉತ್ತಮ ನಾಗರಿಕರಾಗಿ ಹಾಗೂ ಕನ್ನಡಿಗರಾಗಿ ಬದುಕ ಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ರವಿವಾರ ಸಂಜೆ ಜಿಲ್ಲಾ ಆಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾ.ಪಂ ಪುತ್ತೂರು, ನಗರಸಭೆ ಪುತ್ತೂರು, ಜಿಲ್ಲಾ ಮತ್ತು ರಾಜ್ಯ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಸುದಾನ ವಸತಿ ಶಾಲೆ ನೆಹರುನಗರ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನೆಹರುನಗರ ಸುದಾನ ವಸತಿಯುತ ಶಾಲೆ ಆವರಣದಲ್ಲಿ ನಡೆದ 4 ದಿನಗಳ ರಾಜ್ಯಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಸೋಲು ಗೆಲುವು ಎಂಬುದು ಸಹಜವಾಗಿದ್ದು, ಯುವಜನ ಮೇಳಗಳಿಂದ ಯುವ ಸಮುದಾಯದಲ್ಲಿ ಪರಸ್ಪರ ಸಹಬಾಳ್ವೆ ಯನ್ನು ಕಾಣಲು ಹಾಗೂ ಸಹೋದರತೆ ಬೆಳೆಯಲು ಸಾಧ್ಯವಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಜನ ಮೇಳ ಸಹಕಾರಿಯಾಗಿದೆ ಎಂದರು. ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಸವರಾಜ್ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಯುವಜನ ಮೇಳದಲ್ಲಿ ಹಲವು ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಯುವಜನ ಮೇಳದ ರೂಪುರೇಷೆಯಲ್ಲಿ ಬದಲಾವಣೆಗೊಳಿಸಲಾಗುವುದು ಎಂದರು.
ಕುಕ್ಕೆಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುತ್ತೂರು ಮಾಯ್ದೇ ದೇವುಸ್ ಚರ್ಚ್‌ನ ಧರ್ಮಗುರು ಫಾ. ಆಲ್ಫೇಡ್ ಜೆ. ಪಿಂಟೋ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ ಶಿವರಾಮಯ್ಯ, ವಿವೇಕಾನಂದ ಕಾಲೇಜ್‌ನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಕರವೇ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್, ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಸುದಾನ ಶಾಲಾ ಮುಖ್ಯ ಗುರು ಶೋಭಾ ನಾಗರಾಜ್, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರದೀಪ್ ಡಿ’ಸೋಜ ಸ್ವಾಗತಿಸಿದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಂದಿಸಿದರು. ರಾಕೇಶ್ ರೈ ಕಡೆಂಜಿ ನಿರೂಪಿಸಿದರು.







