ಕೀಟ ನಾಶಕ ಬಳಸದೆ ತಾಳ್ಮೆ ವಹಿಸಿ: ರೈತರಿಗೆ ವಿಜ್ಞಾನಿಗಳ ಮನವಿ
ತೆಂಗನ್ನು ಕಾಡುವ ಬಿಳಿ ನೊಣ: ಪರತಂತ್ರ ಜೀವಿಗಳಿಂದ ನಿಯಂತ್ರಣ

ಉಡುಪಿ, ಫೆ. 4: ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಮರಗಳಿಗೆ ಕಾಡುತ್ತಿರುವ ಬಿಳಿ ನೊಣ ಸಮಸ್ಯೆಗೆ ಕೀಟ ನಾಶಕ ಬಳಸದೆ ತಾಳ್ಮೆ ವಹಿಸಿದರೆ ಪರತಂತ್ರ ಹಾಗೂ ಪರಭಕ್ಷಕ ಜೀವಿಗಳಿಂದ ನಿಯಂತ್ರಣ ಸಾಧ್ಯವಿದೆ ಎಂದು ವಿಜ್ಞಾನಿಗಳು ರೈತರಿಗೆ ಹಾಗೂ ತೆಂಗು ಬೆಳೆಗಾರರಿಗೆ ಕಿವಿಮಾತು ಹೇಳಿದ್ದಾರೆ.
ಜಿಲ್ಲಾ ತೋಟಗಾರಿಕಾ ಇಲಾಖೆ, ಬೆಂಗಳೂರಿನ ಎನ್‌ಬಿಎಐಆರ್, ಕಾಸರಗೋಡಿನ ಸಿಪಿಸಿಆರ್‌ಐ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವತಿಯಿಂದ ಬ್ರಹ್ಮಗಿರಿಯ ಎಸ್‌ಕೆಡಿಆರ್‌ಡಿಪಿಯ ಪ್ರಗತಿ ಸೌಧದಲ್ಲಿ ಇತ್ತೀಚೆಗೆ ನಡೆದ ತೆಂಗು ಬೆಳೆಗೆ ತಗಲುವ ಕೀಟ, ರೋಗ ನಿಯಂತ್ರಣ ಕುರಿತ ರೈತ- ವಿಜ್ಞಾನಿ- ಅಧಿಕಾರಿಗಳ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ತೆಂಗನ್ನು ಕಾಡುವ ಕಪ್ಪು ತಲೆ ಹುಳು ಮತ್ತು ಬಿಳಿ ಸುರುಳಿ ಕೀಟ/ನೊಣದ ಕುರಿತು ಮಾಹಿತಿ ನೀಡಿ ಪರಿಹಾರವನ್ನೂ ಸೂಚಿಸಿದರು.
ಉಡುಪಿ ಜಿಲ್ಲೆಯ ಸಮಾರು 17,952 ಹೆಕ್ಟೇರ್ ವ್ಯಾಪ್ತಿಯಲ್ಲಿ ತೆಂಗು ಬೆಳೆಯುತ್ತಿರುವ ರೈತರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರಿನ ಎನ್‌ಬಿಎಐಆರ್ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಶೈಲೇಶ್, ಬಿಳಿ ನೊಣ ಸಮಸ್ಯೆಗೆ ರೈತರು ಯಾವದೇ ಕೀಟನಾಶಕ ಬಳಸದೇ ತಾಳ್ಮೆವಹಿಸಿ ಪರತಂತ್ರ ಜೀವಿಗಳ ಮೂಲಕ ಅವುಗಳ ನಿಯಂತ್ರಣಕ್ಕೆ ಪ್ರಯತ್ನಿಸುವಂತೆ ಮನವಿ ಮಾಡಿದರು.
ಆಮದಾಗುತ್ತಿರುವ ರೋಗ: ವಿವಿಧ ದೇಶಗಳಿಗೆ ತೆರಳಿ ಮರಳಿ ಬರುವಾಗ ವಸ್ತುಗಳ ಜೊತೆಗೆ, ನಿರ್ಬಂಧವಿಲ್ಲದ ಆಮದಿತ ಸಾಮಗ್ರಿಗಳ ಜತೆಗೆ ಕೀಟ, ನೊಣ, ರೋಗಗಳೂ ಭಾರತಕ್ಕೆ ಬರುತ್ತಿವೆ. ಇಂಥ ಅತಿಕ್ರಮಣಕಾರಿ ಕೀಟಗಳು ತೋಟವನ್ನು ಭಾದಿಸುತ್ತಿವೆ. 15ವರ್ಷಗಳ ಹಿಂದೆ ನುಸಿ ರೋಗ ತೆಂಗು ಬೆಳೆಗಾರರನ್ನು ಕಂಗಾಲುಗೊಳಿಸಿದ ಬಳಿಕ ಕಪ್ಪು ತಲೆ ಹುಳ ತೆಂಗನ್ನು ಕಾಡಿದೆ. ಅದೇ ರೀತಿ ತೆಂಗಿನ ಸುಳಿ ದುಂಬಿ, ತೆಂಗಿನ ಕಪ್ಪು ತಲೆ ಹುಳ, ತೆಂಗಿನ ಕೆಂಪು ಮೂತಿ ಹುಳ, ತೆಂಗಿನಕಾಯಿ ನುಸಿ, ತೆಂಗಿನ ಎಲೆ ತಿನ್ನುವ ಕಂಬಳಿ ಹುಳದ ಬಳಿಕ ಈಗ ರೂಗೋಸ್ ಬಿಳಿ ನೊಣ ತೆಂಗನ್ನು ಕಾಡುತ್ತಿದೆ ಎಂದವರು ಮಾಹಿತಿ ನೀಡಿದರು.







