ಶಿಮಮೊಗ್ಗ: ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಯತ್ನ; ಕಾರ್ಯಕರ್ತರ ಬಂಧನ, ಬಿಡುಗಡೆ

ಶಿಮಮೊಗ್ಗ, ಫೆ. 4: ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ ಎಂದು ಆರೋಪಿಸಿ ಭಾನುವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿನೋಬ ನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ ಘಟನೆ ನಡೆಯಿತು.
ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಅರ್ಧದಲ್ಲಿಯೇ ಪೊಲೀಸರು ತಡೆ ಹಿಡಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಕೆಲ ಸಮಯ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವೇಳೆ ಸಂಘಟನೆಯ ಯುವ ಮುಖಂಡ ಕೆ.ರಂಗನಾಥ್, ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್, ನಗರಾಧ್ಯಕ್ಷ ಹೆಚ್.ಪಿ.ಗಿರೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಕಿರಣ್, ಟಿ.ವಿ.ರಂಜಿತ್ ಸೇರಿದಂತೆ ಸುಮಾರು ಆರು ಜನರು ಗಾಯಗೊಂಡು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಘಟನೆ ಕೂಡ ನಡೆಯಿತು. ಸುಮಾರು 30 ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ವಿಫಲ: ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪ್ರಧಾನ ಮಂತ್ರಿಯಾದ ನಂತರ ನರೇಂದ್ರ ಮೋದಿ ನಡೆದುಕೊಂಡಿಲ್ಲ. ಅವರು ನೀಡಿದ ಭರವಸೆಗಳು ಹುಸಿಯಾಗಿವೆ. ಸಮರ್ಥ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ದೇಶವಾಸಿಗಳು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ವರ್ಷಕ್ಕೆ ಲಕ್ಷ, ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೆವೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸುತ್ತೆವೆ ಎಂದೆಲ್ಲ ಬಡಾಯಿ ಕೊಚ್ಚಿಕೊಂಡು ಯುವ ಜನರ ಮತ ಗಳಿಸಿದ ನರೇಂದ್ರ ಮೋದಿ, ಇದೀಗ ದೇಶದ ಯುವ ಜನರನ್ನು ಮರೆತಿದ್ದಾರೆ. ನಿರುದ್ಯೋಗಿಗಳು ಕೆಲಸವಿಲ್ಲದೆ ದಿನದೂಡುವಂತಹ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಾಗರಿಕರು ನೆಮ್ಮದಿಯಾಗಿ ಜೀವನ ನಡೆಸದಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಜನ ವಿರೋಧಿ ನೀತಿಗಳಿಂದ ಉದ್ಯೋಗ ಸೃಷ್ಟಿಯಾಗುವ ಬದಲು, ಈಗಿರುವ ಉದ್ಯೋಗಗಳು ಕಣ್ಮರೆಯಾಗುವಂತಾಗಿದೆ. ಬಡ, ಮಧ್ಯಮ ವರ್ಗದವರ ಗೋಳು ಹೇಳ ತೀರದಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಇನ್ನೊಂದೆಡೆ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಪಕ್ಷವು ರಾಜ್ಯದಲ್ಲಿ ಕೋಮು ರಾಜಕಾರಣ ನಡೆಸುತ್ತಿದೆ. ಸಮಾಜ ಒಡೆಯುವ ಹುನ್ನಾರ ನಡೆಸುತ್ತಿದೆ. ಪಕ್ಷದ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.







