ಬೆಂಗಳೂರು ಕಾರವಾರ ಹೊಸ ಮಾರ್ಗದ ರಾತ್ರಿ ರೈಲಿಗೆ ಸ್ವಾಗತ
ಉಡುಪಿ, ಫೆ.4: ಫೆ.10ರಿಂದ ಆರಂಭಗೊಳ್ಳುವ ನೂತನ ಬೆಂಗಳೂರು- ನೆಲಮಂಗಲ- ಶ್ರವಣಬೆಳಗೊಳ- ಮಂಗಳೂರು- ಕಾರವಾರ ರಾತ್ರಿ ರೈಲಿನ ಸಂಚಾರವನ್ನು ಉಡುಪಿ ರೈಲ್ವೆ ಯಾತ್ರಿಕರ ಸಂಘ ಸ್ವಾಗತಿಸಿದೆ.
ಉಡುಪಿಯಲ್ಲಿ ಫೆ.11ರಂದು ಬೆಳಗ್ಗೆ 7:50ಕ್ಕೆ ರೈಲನ್ನು ಸ್ವಾಗತಿಸಿ, ಹರ್ಷಾಚರಣೆ ಆಚರಿಸಲು ಸಂಘ ನಿರ್ಧರಿಸಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳ ಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್, ಕಳೆದ ಎರಡು ವರ್ಷಗಳಿಂದ ಮೈಸೂರಿನ ಯಾತ್ರಿಕರ ತೊಂದರೆ ಯನ್ನು ಗಮನದಲ್ಲಿಟ್ಟು ಸಂಘವು ಮೈಸೂರಿನಿಂದ ಬೆಂಗಳೂರು ಮೂಲಕ ಮಂಗಳೂರು ಕಾರವಾರಕ್ಕೆ ರಾತ್ರಿ ರೈಲನ್ನು ಆರಂಭಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ನೈಋತ್ಯ ರೈಲ್ವೆಯು ಅದನ್ನು ಕಡೆಗಣಿಸಿತ್ತು. ಆದರೆ ಈಗ ಬೆಂಗಳೂರಿನಿಂದ ನೆಲಮಂಗಲ ಮಂಗಳೂರು ಮುಖಾಂತರ ಕಾರವಾರಕ್ಕೆ ರಾತ್ರಿ ರೈಲನ್ನು ವಾರಕ್ಕೆ ನಾಲ್ಕು ದಿನಗಳ ಕಾಲ ಆರಂಭಿಸಿ ಕರಾವಳಿ ಜನತೆಗೆ ಬಹುದೊಡ್ಡ ಕೊಡುಗೆಯನ್ನೇ ನೀಡಿದೆ ಎಂದರು.
ರೈಲ್ವೆಯ ಈ ಕೊಡುಗೆಯನು ಉಡುಪಿ ರೈಲ್ವೆ ಯಾತ್ರಿಕರ ಸಂಘ ಸ್ವಾಗತಿಸು ತ್ತದೆ. ಈ ಸಂದರ್ಭದಲ್ಲಿ ಇಂದ್ರಾಳಿ ರೈಲ ನಿಲ್ದಾಣದಲ್ಲಿ ಸಿಹಿ ಹಂಚಿ ನಮ್ಮ ಸಂತೋಷವನ್ನು ವ್ಯಕ್ತ ಪಡಿಸಲಿದ್ದೇವೆ ಎಂದವರು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಆರ್.ಮಂಜ, ಕೋಶಾಧಿಕಾರಿ ರಾಮಚಂದ್ರ ಆಚಾರ್ಯ, ನಿರ್ದೇಶಕರುಗಳಾದ ಪ್ರಭಾಕರ ಆಚಾರ್ಯ, ಜಾನ್ ರೆಬೆಲ್ಲೊ, ಸದಾನಂದ ಅಮೀನ್, ಶೇಖರ್ ಕೋಟಿಯನ್, ಸುಂದರ್ ಕೋಟಿಯನ್, ಅಜಿತ್ ಶೆಣೈ, ಜನಾರ್ಧನ್ ಕೋಟಿಯಾನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ವಂದಿಸಿದರು.







