ಸಿರಿಯದಲ್ಲಿ ರಶ್ಯದ ‘ಪ್ರತೀಕಾರ’ ದಾಳಿ: ಕನಿಷ್ಠ 30 ಶಂಕಿತ ಉಗ್ರರ ಹತ್ಯೆ

ಮಾಸ್ಕೊ,ಫೆ.4: ಅಂತರ್ಯುದ್ಧ ಪೀಡಿತ ಸಿರಿಯದಲ್ಲಿ ಶಂಕಿತ ಬಂಡುಕೋರರು ರಶ್ಯದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದ ಮರುದಿನವೇ ಪ್ರತೀಕಾರದ ಕ್ರಮವಾಗಿ ರಶ್ಯವು ರವಿವಾರ ವಾಯುದಾಳಿ ನಡೆಸಿ, ಕನಿಷ್ಠ 30 ಮಂದಿ ಬಂಡುಕೋರರನ್ನು ಹತ್ಯೆಗೈದಿದೆ.
‘ಜಭತ್ ಅಲ್-ನುಸ್ರಾ’ ಉಗ್ರಗಾಮಿ ಗುಂಪಿನ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಅತ್ಯಧಿಕ ನಿಖರತೆಯ ಶಸ್ತ್ರಾಸ್ತ್ರ ದಾಳಿಯನ್ನು ನಡೆಸಲಾಗಿದೆ’’ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ಜಭಾತ್ ಅಲ್ ನುಸ್ರಾ ಗುಂಪಿನ ಉಗ್ರರು ರಶ್ಯದ ಎಸ್‌ಯು-25 ಜೆಟ್ ವಿಮಾನವನ್ನು ಶನಿವಾರ ಹೊಡೆದುರುಳಿಸಿದ್ದರು ಎಂದು ಅದು ಹೇಳಿದೆ.
ಇಂದು ರಶ್ಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ 30ಕ್ಕೂ ಅಧಿಕ ಅಲ್-ನುಸ್ರಾ ಉಗ್ರರು ಹತರಾಗಿದ್ದಾರೆಂದು, ಬಂಡುಕೋರರ ರೇಡಿಯೋ ಸಂದೇಶಗಳ ಕದ್ದಾಲಿಕೆಯಿಂದ ತಿಳಿದುಬಂದಿದೆ.
ಶನಿವಾರ ರಶ್ಯದ ರಕ್ಷಣಾ ಸಚಿವಾಲಯ ಹೇಳಿಕೆಯೊಂದನ್ನು ನೀಡಿ. ಹೊಡೆದುರುಳಿಸಲ್ಪಟ್ಟ ಜೆಟ್ ವಿಮಾನದಲ್ಲಿದ್ದ ಪೈಲಟ್ ಬದುಕುಳಿದನಾದರೂ, ಆನಂತರ ಆತ ಉಗ್ರರೊಂದಿಗೆ ನಡೆದ ಕದನದಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದೆ. ವಿಮಾನ ಪತನಗೊಂಡಾಗ ತಾನು ಪ್ಯಾರಾಚೂಟ್ ಮೂಲಕ ಜಿಗಿದಿರುವುದಾಗಿ ಪೈಲಟ್ ರಶ್ಯದ ಸೇನಾಧಿಕಾರಿಗಳಿಗೆ ತಿಳಿಸಿದ್ದನೆನಲಾಗಿದೆ.
2017ರ ಮೇ ತಿಂಗಳಲ್ಲಿ ಸಿರಿಯ ಕದನವಿರಾಮದ ಒಪ್ಪಂದದಲ್ಲಿ ಖಾತರಿದಾರರಾದ ರಶ್ಯ, ಇರಾನ್ ಹಾಗೂ ಟರ್ಕಿಗಳು ಸಿರಿಯದಲ್ಲಿ ಇದ್ಲಿಬ್ ಪ್ರಾಂತ ಸೇರಿದಂತೆ ಸಿರಿಯದಲ್ಲಿ ಸಂಘರ್ಷರಹಿತ ವಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.







